ಬೆಂಗಳೂರು: ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಒಂದು ಕಡೆ ಚುನಾವಣಾ ಪ್ರಚಾರ ಕಾರ್ಯ.. ಮತ್ತೊಂದು ಕಡೆ ಕ್ಷೇತ್ರ ಆಯ್ಕೆಯ ಗೊಂದಲ. ಕಾಂಗ್ರೆಸ್ ನಲ್ಲಿ ಇದೀಗ ಕ್ಷೇತ್ರ ಆಯ್ಕೆಯದ್ದೆ ಹೆಚ್ಚು ಸುದ್ದಿಯಾಗುತ್ತಿದೆ. ಸಿದ್ದರಾಮಯ್ಯ ಅವರ ಹಾದಿಯನ್ನೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಿಡಿಯುತ್ತಾರ ಎಂಬ ಚರ್ಚೆಗಳು ಶುರುವಾಗಿದೆ.
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರವೇ ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿತ್ತು. ಫೈನಲಿ ಸಿದ್ದರಾಮಯ್ಯ ಅವರು ಕೋಲಾರವನ್ನು ಆಯ್ಕೆ ಮಾಡಿಕೊಂಡರು. ಸುಲಭಾವಗಿ ಗೆಲ್ಲುವ ವರುಣಾ ಕ್ಷೇತ್ರವನ್ನು ಮಗ ಯತೀಂದ್ರ ಸಿದ್ದರಾಮಯ್ಯ ಅವರಿಗಾಗಿ ಬಿಟ್ಟುಕೊಡಲಾಗಿದೆ.
ಇದೀಗ ಡಿಕೆ ಶಿವಕುಮಾರ್ ಅದೇ ಹಾದಿ ಹಿಡಿದಿದ್ದಾರೆ ಎನ್ನಲಾಗಿದೆ. ಕನಕಪುರದ ಬಂಡೆ ಎಂದೇ ಖ್ಯಾತಿ ಪಡೆದಿರುವ ಡಿಕೆಶಿ, ಕನಕಪುರದಲ್ಲಿ ನಿಂತರೆ ಗೆಲುವು ಖಚಿತ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಸುಲಭವಾಗಿ ಗೆಲ್ಲುವ ಕ್ಷೇತ್ರವನ್ನು ಕುಟುಂಬಸ್ಥರು ಅಥವಾ ಆಪ್ತರನ್ನು ಕಣಕ್ಕೆ ಇಳಿಸುವ ಪ್ಲ್ಯಾನ್ ನಲ್ಲಿದ್ದಾರೆ. ಕನಕಪುರ ಬಿಟ್ಟು ಮದ್ದೂರಿನಲ್ಲಿ ಈ ಬಾರಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮದ್ದೂರು ಕ್ಷೇತ್ರ ಒಕ್ಕಲಿಗರ ಪ್ರಾಬಲ್ಯ ಇರುವಂತದ್ದು. ಈ ಮೊದಲು ಎಸ್ ಎಂ ಕೃಷ್ಣ ಅವರು ಅಲ್ಲಿಂದ ಗೆದ್ದಿದ್ದರು. ಮದ್ದೂರಿನಿಂದ ಗೆದ್ದರೆ ಒಕ್ಕಲಿಗರ ಸಪೋರ್ಟ್ ಸಿಗುತ್ತೆ ಎಂಬುದು ಅವರ ಅಭಿಪ್ರಾಯವಾಗಿದೆ. ಮದ್ದೂರಿನ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಗುರುಚರಣ್ ಕೂಡ ಈ ಬಗ್ಗೆ ಸುಳಿವು ನೀಡಿದ್ದಾರೆ. 27ರ ನಂತರ ಅವರು ಈ ಬಗ್ಗೆ ಹೇಳಲಿದ್ದಾರೆ ಎಂದಿದ್ದಾರೆ.