31 ವರ್ಷದ ಹಿಂದಿನ ಸೋಲಿನ ಬಗ್ಗೆ ಸಿದ್ದರಾಮಯ್ಯ ನೀಡಿದ ಹೇಳಿಕೆ ಈಗ ಬಿಜೆಪಿಗೆ ಅಸ್ತ್ರ..!

1 Min Read

ಈ ಶೀರ್ಷಿಕೆ ನೋಡಿ ನಿಮಗೆ ಹೌದಾ ಎಂಬ ಶಾಕಿಂಗ್ ರಿಯಾಕ್ಷನ್ ಬರಬಹುದು. ಆದರೆ ಇದು ಸತ್ಯ. ಕೆಲವೊಂದು ಸಲ ರಾಜಕಾರಣಿಗಳು ನಡೆಯುತ್ತಿರುವ ಬೆಳವಣಿಗೆ, ತಾವೇ ಮಾಡಿದ ಆರೋಪಗಳೇನು ಎಂಬುದೆಲ್ಲ ಮರೆತು ಕೆಲವೊಂದು ಹೇಳಿಕೆಗಳನ್ನ ನೀಡಿ ಬಿಡ್ತಾರೆ. ಇದೀಗ ಸಿದ್ದರಾಮಯ್ಯ ಅವರ ಪರಿಸ್ಥಿತಿ ಹಾಗೇ ಆಗಿದೆ. ಸದ್ಯ ಕಾಂಗ್ರೆಸ್ ಹೈಕಮಾಂಡ್ ನಾಯಕರು ಬಿಜೆಪಿ ವಿರುದ್ಧ ಮತಗಳ್ಳತನದ ಆರೋಪದ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ಇಂಥ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಹೇಳಿದ ಹೇಳಿಕೆಯೊಂದು ಬಿಜೆಪಿಗರಿಗೆ ಅಸ್ತ್ರವಾಗಿದೆ.

1991ರ ಲೋಕಸಭಾ ಚುನಾವಣೆಯಲ್ಲಿ ನಾನು ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಆಗ ಮೋಸದಿಂದ ನನ್ನನ್ನು ಸೋಲಿಸಿದ್ದರು. ಚುನಾವಣಾ ಫಲಿತಾಂಶವನ್ನು ನಾನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದೆ. ಆ ಸಂದರ್ಭದಲ್ಲಿ ಪ್ರೊ. ರವಿಕುಮಾರ್ ವರ್ಮಾ ಅವರು ನನಗೆ ತುಂಬಾ ಸಲಹೆಗಳನ್ನು ನೀಡಿದ್ದರು ಎಂದು ಇತ್ತೀಚೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕರ್ನಾಟಕದ ಮಾಜಿ ಅಡ್ವಿಕೇಟ್ ಜನರಲ್ ಪ್ರೊ.ರವಿ ಕುಮಾರ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ್ದರು‌.

1991ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಅದು ಜನತಾದಳದ ಅಭ್ಯರ್ಥಿಯಾಗಿ. ಆಗ ಅಲ್ಲಿನ ಹಾಲಿ ಸಂಸದರಾಗಿದ್ದದ್ದು ಬಸವರಾಜ ಪಾಟೀಲ್ ಅನ್ವರಿ. 1991ರ ಚುನಾವಣೆಗೂ ಮುನ್ನ ನಡೆದಿದ್ದ 1989ರ ಲೋಕಸಭಾ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಜನತಾದಳದಿಂದ ಸ್ಪರ್ಧಿಸಿದ್ದ ಅನ್ವರಿಯವರು ಗೆದ್ದು ಸಂಸದರಾಗಿದ್ದರು. 1991ರ ಹೊತ್ತಿಗೆ ಅವರು ಕಾಂಗ್ರೆಸ್ ಸೇರಿ, ಸ್ಪರ್ಧೆ ಮಾಡಿದ್ದರು. ಅವರಿಗೆ ಟಕ್ಕರ್ ಕೊಡುವ ಉದ್ದೇಶದಿಂದಾನೇ ಜನತಾದಳ ಆಗ ಸಿದ್ದರಾಮಯ್ಯ ಅವರನ್ನು ಕಣಕ್ಕೆ ಇಳಿಸಿತ್ತು. ಆದರೆ ಅನ್ವರಿ ಅವರು 11,200 ಮತಗಳ ಅಂತರದಲ್ಲಿ ಜಯ ಗಳಿಸಿದ್ದರು. ಆ ಸಂಬಂಧ ಸಿದ್ದರಾಮಯ್ಯ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಆ ವಿಚಾರವನ್ನ ಸಿದ್ದರಾಮಯ್ಯ ಅವರು ಈಗ ಪ್ರಸ್ತಾಪಿಸುತ್ತಲೇ, ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಚುನಾವಣಾ ಅಕ್ರಮದಲ್ಲಿ ಕಾಂಗ್ರೆಸ್ ಪಿತಾಮಹ. ಅಂತದ್ರಲ್ಲಿ ಬಿಜೆಪಿಯ ಮತಗಳ್ಳತನದ ಬಗ್ಗೆ ಮಾತನಾಡುತ್ತಿದೆ ಎಂದು ಟೀಕಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks