ಮೈಸೂರು: ಚುನಾವಣೆಯ ದಿನ ಸಮೀಪವಾಗುತ್ತಿದ್ದು, ರಾಜಕೀಯ ಪಕ್ಷಗಳು ಗರಿಗೆದರುತ್ತಿವೆ. ರಾಜಕೀಯ ಚಟುವಟಿಕೆಯಲ್ಲಿ ಆಕ್ಟೀವ್ ಆಗಿವೆ. ಅದರ ಭಾಗವಾಗಿ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ, ಬಿಜೆಪಿಯ ಜನ ಸಂಕಲ್ಪ ಯಾತ್ರೆ, ಜೆಡಿಎಸ್ ನ ಪಂಚ ಯೋಜನೆಯ ರಥಯಾತ್ರೆ ಆರಂಭವಾಗಿವೆ. ಇದರ ನಡುವೆ ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿಗಳನ್ನು ಹಾಕಬೇಕು ಎಂಬ ಗೊಂದಲ ಒಂದು ಕಡೆ. ಹಿರಿಯರು ಎಲ್ಲಿ ನಿಲ್ಲಬೇಕೆಂಬ ಚರ್ಚೆಗಳು ನಡೆಯುತ್ತಿವೆ. ಇದೆಲ್ಲದರ ನಡುವೆ ಸಾಮಾನ್ಯ ಜನರಿಗೂ ಇರುವ ಕುತೂಹಲವೆಂದರೆ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು.
ಕೆಲವು ಜಿಲ್ಲೆಗಳಿಂದ ಸಿದ್ದರಾಮಯ್ಯ ಅವರಿಗೆ ಡಿಮ್ಯಾಂಡ್ ಇದೆ. ನಮ್ಮ ಜಿಲ್ಲೆಗೆ ಬಂದರೆ ಗೆಲ್ಲಿಸುವ ಜವಬ್ದಾರಿ ನಮ್ಮದು ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಈ ಬಲವಂತ ಇಂದು ನಿನ್ನೆಯದ್ದಲ್ಲ. ಚುನಾವಣೆಗೆ ಬಹಳ ದೂರ ಇರುವಾಗಲೇ ಶುರುವಾಗಿದೆ. ಆದರೆ ಸಿದ್ದರಾಮಯ್ಯ ಮಾತ್ರ ಇನ್ನು ತಮ್ಮ ಕ್ಷೇತ್ರ ನಿರ್ಧಾರ ಮಾಡಿಲ್ಲ. ಇದರ ನಡುವೆ, ಇಂದು ಕೋಲಾರ ಕಾರ್ಯಕರ್ತರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.
ಸಿದ್ದರಾಮಯ್ಯ ಅವರು ಮೈಸೂರಿನ ಪಾರ್ಕ್ ಒಂದರಲ್ಲಿ ಬೆಳಗಿನ ವಾಕಿಂಗ್ ಹೋಗಿದ್ದರು. ಕೋಲಾರದಿಂದ ಹೋದ ಕಾರ್ಯಕರ್ತರ ಪಡೆಯೊಂದು ಪಾರ್ಕ್ ನಲ್ಲಿಯೇ ಭೇಟಿ ಮಾಡಿ, ಮಾತನಾಡಿದ್ದಾರೆ. ಈ ಬಾರಿ ಕೋಲಾರ ಕ್ಷೇತ್ರದಲ್ಲಿಯೇ ನೀವೂ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರು, ಕಾರ್ಯಕರ್ತರ ಸಮಾಧಾನಕ್ಕೋಸ್ಕರ, ಆಯ್ತು ಬಿಡಿ ಒಂದು ದಿನ ಕೋಲಾರಕ್ಕೆ ಭೇಟಿ ನೀಡಿ, ನಿಮ್ಮೆಲ್ಲರ ಜೊತೆಗೂ ಮಾತನಾಡುತ್ತೇನೆ ಎಂದಿದ್ದಾರೆ. ಇದರ ನಡುವೆ ಕಾರ್ಯಕರ್ತರು ತಾವೂ ತಂದಿದ್ದ, ಹಾರ ಹಾಕಿ, ಖುಷಿ ಪಟ್ಟಿದ್ದಾರೆ. ಸಿದ್ದರಾಮಯ್ಯ ಜೊತೆಗೊಂದು ಫೋಟೋ ತೆಗೆಸಿಕೊಂಡಿದ್ದಾರೆ.