ಬೆಂಗಳೂರು: ನಾಳೆ ರಾಜ್ಯಸಭೆ ಚುನಾವಣೆ ನಡೆಯಲಿದೆ. ನಮ್ಮ ಅಭ್ಯರ್ಥಿಗೆ ಬೆಂಬಲ ಕೊಡಿ ಅಂತ ಜೆಡಿಎಸ್ ಕೇಳಿದ್ರೆ, ಬಿಜೆಪಿ ಸೋಲಿಸುವ ಉದ್ದೇಶ ತಾನೇ ಇರುವುದು ನಮಗೆ ಬೆಂಬಲ ನೀಡಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಈ ಮಧ್ಯೆ ಜೆಡಿಎಸ್ ಶಾಸಕರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದು, ಹೆಚ್ ಡಿ ಕುಮಾರಸ್ವಾಮಿ ಕೋಪಕ್ಕೂ ಕಾರಣವಾಗಿದೆ.
ಪತ್ರದಲ್ಲಿ ಮತ ಹಾಕುವಂತೆ ಸಿದ್ದರಾಮಯ್ಯ ಕೇಳಿಕೊಂಡಿದ್ದಾರೆ. ಜಾತಿವಾದಿ ಬಿಜೆಪಿಗೆ ತಕ್ಕ ಉತ್ತರ ನೀಡಬೇಕು ಹೀಗಾಗಿ ಕಾಂಗ್ರೆಸ್ ಪಕ್ಷದ ಎರಡನೇ ಅಭ್ಯರ್ಥಿಗೆ ಮತ ನೀಡಿ. 37 ಶಾಸಕರನ್ನು ಹೊಂದಿದ್ದ ಜೆಡಿಎಸ್ ಬೆಂಬಲಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ರಾಜ್ಯಸಭೆಗೆ ನಾವೂ ಅಭ್ಯರ್ಥಿ ಘೋಷಿಸಿದ ಮರುದಿನ ಜೆಡಿಎಸ್ ಅಭ್ಯರ್ಥಿಯನ್ನು ಹಾಕಿದ್ದಾರೆ.
ಸರ್ವಜನಾಂಗದ ಶಾಂತಿಯ ತೋಟವನ್ನು ಬಿಜೆಪಿ ಹಾಳು ಮಾಡುತ್ತಿದೆ. ರಾಜ್ಯಸಭೆ ಚುನಾವಣೆ ಮೂಲಕ ಒದಗಿ ಬಂದ ಅವಕಾಶವನ್ನು ಬಳಸಿಕೊಂಡು, ಬಿಜೆಪಿಗೆ ತಕ್ಕ ಉತ್ತರ ನೀಡಬೇಕು. ಹೀಗಾಗಿ ಎರಡನೇ ಅಭ್ಯರ್ಥಿಗೆ ಮತ ಹಾಕಿ ಎಂದು ಮನವಿ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಆತ್ಮಸಾಕ್ಷಿ ಆತ್ಮಸಾಕ್ಷಿ ಅಂತಾರಲ್ಲ. ಯಾವ ಆತ್ಮಸಾಕ್ಷಿಯ ಆಧಾರದ ಮೇಲೆ ನಮ್ಮ ಶಾಸಕರಿಗೆ ಪತ್ರ ಬರೆದಿದ್ದಾರೆ. ಅವರು ಯಾಕೆ ನಮ್ಮ ಶಾಸಕರಿಗೆ ಪತ್ರ ಬರೆಯಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.