ಬೆಂಗಳೂರು: ರಾಜ್ಯ ಸರ್ಕಾರ ಮುಜರಾಯಿ ಇಲಾಖೆ ಅಡಿ ಇರುವ ದೇವಸ್ಥಾನಗಳನ್ನು ಸ್ವತಂತ್ರಗೊಳಿಸುವ ನಿಟ್ಟಿನಲ್ಲಿ ಯೋಚನೆ ಮಾಡಿದೆ. ಆ ಬಗ್ಗೆ ಈಗಾಗಲೇ ಕೆಲಸವು ನಡೆಯುತ್ತಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜನರು ಇವರ ದುಷ್ಟ ಹುನ್ನಾರಗಳನ್ನ ಅರ್ಥ ಮಾಡಿಕೊಳ್ಳಬೇಕು. ಧರ್ಮ, ದೇವರು, ಚರ್ಚ್, ಮಸೀದಿಗಳ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಹಾಗೇ ಎಲ್ಲದನ್ನು ಅಂಬಾನಿ, ಅದಾನಿಗೆ ಡಂಬ ಬಂಡವಾಳ ಶಾಹಿಗಳಿಗೆ ಅಡಮಾನ ಇಡುತ್ತಿದ್ದಾರೆ. ಇದು ಮನುವಾದಿಗಳ ಪುರಾತನ ಅಜೆಂಡಾ.
ಬಿಜೆಪಿಯೂ ಆರಂಭದಿಂದಲೂ ಸುಳ್ಳುಗಳ ಫ್ಯಾಕ್ಟರಿ. ಸುಳ್ಳುಗಳನ್ನೇ ಮಾರಿ ರಾಜಕಾರಣ ಮಾಡುತ್ತಿದ್ದಾರೆ. ದೇವಸ್ಥಾನಗಳು ಈಗಲೂ ಸ್ವತಂತ್ರವಾಗಿಯೆ ಇವೆ. ಸರ್ಕಾರ ಅನೇಕ ದೇವಸ್ಥಾನಗಳಿಗೆ ನೆರವು ನೀಡುವುದರ ಮೂಲಕ ಅವುಗಳನ್ನು ಪೊರೆಯುತ್ತಿದೆ. ಮುಜರಾಯಿ ಇಲಾಖೆಯ ವಾರ್ಷಿಕ ಬಜೆಟ್ಟು ಸುಮಾರು 350 ಕೋಟಿಗಳಷ್ಟಿದೆ. ಸರ್ಕಾರವೇ ದೇವಸ್ಥಾನಗಳನ್ನು ನಡೆಸುವುದೆಂದರೆ ಸಮಾಜದ ಕಟ್ಟ ಕಡೆಯ ಮನುಷ್ಯರಿಗೂ ಅವುಗಳ ಮೇಲೆ ಹಕ್ಕುಗಳು ಇವೆಯೆಂದು ಅರ್ಥ. ಸರ್ಕಾರ ದೇವಸ್ಥಾನಗಳ ಮೇಲಿನ ಹಿಡಿತವನ್ನು ತಪ್ಪಿಸುವುದೆಂದರೆ ಜನ ಸಮುದಾಯಗಳಿಗೆ ಇರುವ ಅಧಿಕಾರವನ್ನು ತಪ್ಪಿಸುವುದೆಂದು ಅರ್ಥ.