ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸಾಕಷ್ಟು ವಿಚಾರಗಳು ಭುಗಿಲೇಳುತ್ತಿವೆ. ಅದರಲ್ಲೂ ಶ್ರೀರಾಮಸೇನೆ ಕಾರ್ಯಕರ್ತರ ವಿಚಾರವಾಗಿ ಸಿದ್ದರಾಮಯ್ಯ ಅವರು ಆಕ್ರೋಶಗೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ @BSBommai ಅವರು ಇನ್ನೂ ಅಧಿಕಾರದಲ್ಲಿದ್ದರೆ ತಕ್ಷಣ ಧಾರವಾಡದ ಮುಸ್ಲಿಂ ವರ್ತಕರ ಮೇಲೆ ದೌಜ್ಯನ್ಯವೆಸಗಿದ್ದ ಶ್ರೀರಾಮ ಸೇನೆಯ ಪುಂಡರನ್ನು ಒದ್ದು ಒಳಗೆ ಹಾಕಲು ಪೊಲೀಸರಿಗೆ ಆದೇಶ ನೀಡಬೇಕು, ಸಾಧ್ಯವಿಲ್ಲ ಎಂದಾದರೆ ರಾಜೀನಾಮೆ ನೀಡಿ ಕುರ್ಚಿಯ ಮಾನ ಕಾಪಾಡಿ.
ಭಾರತೀಯ ಜನತಾ ಪಕ್ಷ ಹೇಳಿಕೊಂಡು ಬರುತ್ತಿರುವ ‘ರಾಮ ರಾಜ್ಯ’ದ ಒಂದು ಚಿತ್ರವನ್ನು ರಾಮ ನವಮಿಯ ಹಿನ್ನೆಲೆಯಲ್ಲಿ ಧಾರವಾಡದ ಶ್ರೀರಾಮಸೇನೆಯ ಗೂಂಡಾಗಳು ಜಗತ್ತಿನ ಮುಂದೆ ಇಟ್ಟಿದ್ದಾರೆ. ಇಂತಹ ಗೂಂಡಾಗಳಿಗೆ ರಾಮನ ಹೆಸರು ಹೇಳುವ ಯಾವ ಯೋಗ್ಯತೆ ಇದೆ.
ಧಾರವಾಡದಲ್ಲಿ ನಡೆದ ಹಲ್ಲೆ ಕೇವಲ ಮುಸ್ಲಿಂ ವ್ಯಾಪಾರಿಗಳ ಮೇಲೆ ನಡೆದದ್ದಲ್ಲ, ಅದು ಅವರು ಮಾರಾಟ ನಡೆಸುತ್ತಿದ್ದ ಕಲ್ಲಂಗಡಿ ಬೆಳೆಯುವ ರೈತರ ಮೇಲೆ ನಡೆದಿರುವ ದೌರ್ಜನ್ಯವೂ ಆಗಿದೆ. ಈ ಗೂಂಡಾಗಳನ್ನು ಹೀಗೆ ಸ್ವತಂತ್ರವಾಗಿ ಬಿಟ್ಟರೆ ಇವರು ಎಲ್ಲರ ಮನೆ ಬಾಗಿಲು ತಟ್ಟಲಿದ್ದಾರೆ.
ಮುಖ್ಯಮಂತ್ರಿ @BSBommai ಅವರು ಜನರ ಗಮನವನ್ನು ಬೇರೆಡೆ ಸೆಳೆದು, ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಸರ್ಕಾರವನ್ನೇ ಸಂಘ ಪರಿವಾರಕ್ಕೆ ಔಟ್ ಸೋರ್ಸ್ ಮಾಡಿ, ಅಲ್ಲಿನ ಪುಂಡರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡ ಹಾಗೆ ಕಾಣುತ್ತಿದೆ. ರಾಜ್ಯದ ಇತಿಹಾಸದಲ್ಲಿ ಇದೊಂದು ಶಾಶ್ವತ ಕಳಂಕ.
ರಾಜ್ಯದ ಪೊಲೀಸ್ ಮಹಾನಿರ್ದೇಶಕರ ಹೇಳಿಕೆಯನ್ನು ಧಿಕ್ಕರಿಸುತ್ತಿರುವ ಈ @CTRavi_BJP, ರವಿಕುಮಾರ್ ಮೊದಲಾದ ಕೂಗುಮಾರಿಗಳ ಬಾಯಿಮುಚ್ಚಿಸಲಾಗದಷ್ಟು ಮುಖ್ಯಮಂತ್ರಿ @BSBommai ಅವರು ಮೂಕ ಬಸವಣ್ಣನಾಗಿದ್ದಾರೆ. ಇಂತಹ ತಂಟೆಕೋರರ ಬೇಜವಾಬ್ದಾರಿ ಹೇಳಿಕೆಗಳಿಂದಾಗಿ ಇಡೀ ಪೊಲೀಸ್ ಇಲಾಖೆ ನೈತಿಕವಾಗಿ ಕುಸಿದುಹೋಗುತ್ತಿದೆ.
ರಾಜಕೀಯ ದುರುದ್ದೇಶದಿಂದ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು @BJP4Karnataka ಮತ್ತು ಸಂಘ ಪರಿವಾರ ನಡೆಸುತ್ತಿರುವ ಪುಂಡಾಟಿಕಗಳಿಗಳಿಂದಾಗಿ ಹೊರರಾಜ್ಯ ಮತ್ತು ಹೊರದೇಶಗಳ ಎದುರು ಕೂಡುಬಾಳ್ವೆಗೆ ಹೆಸರಾದ ಶಾಂತಿ ಮತ್ತು ಸೌಹಾರ್ದಪ್ರಿಯ ಕನ್ನಡಿಗರು ತಲೆತಗ್ಗಿಸುವಂತಾಗಿದೆ.
ಇದನ್ನು ಕನ್ನಡಿಗರು ಎಂದೂ ಕ್ಷಮಿಸರು ಎಂದು ಸರಣಿ ಟ್ವೀಟ್ ಮೂಲಕ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.