ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಬಗರ್ ಹುಕುಂ ವಿಚಾರ ಸದ್ದು ಮಾಡಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಬಗರ್ ಹುಕುಂ ವಿಚಾರವನ್ನ ತೆಗೆದಿದ್ದಾರೆ. ಈ ವಿಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಸಾಥ್ ನೀಡಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಅವರು, ಸಿಎಂ ಆದಷ್ಟು ಬೇಗ ಈ ಸಮಸ್ಯೆ ಬಗ್ಗೆ ಕ್ರಮವಹಿಸಿ ಸಮಸ್ಯೆ ಕೊನೆಗಾಣಿಸಬೇಕು. ಸಮಸ್ಯೆ ಮುಂದುವರೆದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ತರಲ್ಲ. ಬಗರ್ ಹುಕುಂ ಸಮಸ್ಯೆಯಿಂದ ಹೋರಾಟ ಶುರುವಾಗಬಹುದು. ಅಗತ್ಯ ಬಿದ್ರೆ ಸದನ ಸಮಿತಿ ರಚಿಸಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಇದೇ ವೇಳೆ ಯಡಿಯೂರಪ್ಪ ಅವರ ಆಗ್ರಹಕ್ಕೆ ಸಚಿವ ಮಾಧುಸ್ವಾಮಿ ಉತ್ತರ ನೀಡಿದ್ದು, ಬಗರ್ ಹುಕುಂ ಸಾಗುವಳಿಯಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ರಾಜ್ಯ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವ ಕೆಲಸ ಮಾಡಲಿದೆ. ಅರಣ್ಯ ಇಲಾಖೆ ಕಟಾವು ಮಾಡಿರುವ ರೈತರ ಬೆಳೆಗೆ ಪರಿಹಾರ ನೀಡಲಾಗುತ್ತೆ ಎಂದಿದ್ದಾರೆ.
ಈ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಎಸ್ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದಾರೆ. ಸಮಸ್ಯೆ ಪರಿಹಾರ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು. ಅರಣ್ಯ ಅಧಿಕಾರಿಗಳ ಧೋರಣೆ ಸರಿಯಲ್ಲ. ಕೂಡಲೆ ಸಾಗುವಳಿ ಮಾಡಿದ ರೈತರ ಸಂಕಷ್ಟ ಪರಿಹರಿಸಲಿ ಎಂದು ಸಿದ್ದರಾಮಯ್ಯ ಅವರು, ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಜೊತೆಗೆ ಸ್ಪೀಕರ್ ಸೇರಿದಂತೆ ಬಹುತೇಕ ಹಿರಿಯರಿಂದಲೂ ಆಕ್ಷೇಪ ವ್ಯಕ್ತವಾಗಿದ್ದಾರೆ.