ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕೋಲಾರದಲ್ಲಿ ಘರ್ಜಿಸಿದ್ದಾರೆ. ಇಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಘಂಟಾಘೋಷವಾಗಿ ಹೇಳಿದ್ದಾರೆ. ಈ ಮಾತು ಕೆಲವರಲ್ಲಿ ನಡುಕವನ್ನು ಉಂಟು ಮಾಡಿರಬಹುದು. ಇದೀಗ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಾರಿ ಟಿಕೆಟ್ ಆಕಾಂಕ್ಚಿಯಾಗಿರುವ ವರ್ತೂರು ಪ್ರಕಾಶ್, ನಾನು ಸಿದ್ದರಾಮಯ್ಯ ಅವರನ್ನು ಎದುರಿಸಲು ಸಿದ್ಧನಿದ್ದೇನೆ. ಆದರೆ ಅವರು ಯಾರದ್ದೋ ಮಾತನ್ನು ಕೇಳಿಕೊಂಡು ಇಲ್ಲಿಗೆ ಬಂದಿದ್ದಾರೆ. ಕೊನೆಗೆ ಅನಾಥರಾಗುತ್ತಾರೆ. ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರದ ಬಗ್ಗೆ ಗೊತ್ತಿಲ್ಲ.
ಅವರು ಕುರುಬ ಸಮುದಾಯದವರಾದ ಮಾತ್ರಕ್ಕೆ ಇಡೀ ಸಮುದಾಯದ ಮತಗಳು ಅವರಿಗೆ ಬೀಳುವುದಿಲ್ಲ. ಬಾದಾಮಿ ಕ್ಷೇತ್ರದಲ್ಲಿ 60 ಸಾವಿರ ಕುರುಬ ಮತಗಳು ಇದ್ದವು. ಆದರೂ ಅವರಿಗೆ ಯಾಕೆ ಅಷ್ಟು ಮತಗಳು ಬಿದ್ದವು. ಅವರವರ ಕ್ಷೇತ್ರದಲ್ಲಿ ಅವರೇ ನಾಯಕರು. ನನ್ನ ಕ್ಷೇತ್ರಕ್ಕೆ ಬಂದು ಅನ್ಯಾಯ ಮಾಡುತ್ತಿದ್ದಾರೆ. ಇಲ್ಲೇನಿದ್ದರು ಬಿಜೆಪಿ ಮತ್ತು ಜೆಡಿಎಸ್ ಗೆ ಮಾತ್ರ ಫೈಟ್ ಇರೋದು. ನಾನು ಸಿದ್ದರಾಮಯ್ಯ ಅವರನ್ನು ಸೋಲಿಸುತ್ತೇನೆ ಎಂದಿದ್ದಾರೆ.