ಚುನಾವಣೆಯ ಫಲಿತಾಂಶ ಹೊರಬಿದ್ದು ನಾಲ್ಕು ದಿನಗಳಾಗುತ್ತಿವೆ. ಬಹುಮತ ಪಡೆದುಕೊಂಡಿರುವ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯಾಕಂದ್ರೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಖುರ್ಚಿಗಾಗಿ ಗುದ್ದಾಟ ಶುರುವಾಗಿದೆ. ಇದು ಹೈಕಮಾಂಡ್ ಗೂ ತಲೆ ನೋವಾಗಿದೆ.

ಸದ್ಯ ನಾಲ್ಕು ದಿನದಿಂದ ನಡೆಯುತ್ತಿರುವ ಸಭೆ, ಸಮಾಧಾನ, ಸಂಧಾನ ಈ ಎಲ್ಲವೂ ಯಶಸ್ವಿಯಾಗಿದ್ದು, ಮೂಲಗಳ ಪ್ರಕಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಮುಖ್ಯಮಂತ್ರಿ ಖುರ್ಚಿ ಸಿಕ್ಕಿದೆ ಎನ್ನಲಾಗುತ್ತಿದೆ. ಇರುವ ಐದು ವರ್ಷದಲ್ಲಿ ಕಾಂಗ್ರೆಸ್ ನಿಂದ ಇಬ್ಬರು ಸಿಎಂ ಆಗಲಿದ್ದಾರೆ ಎನ್ನಲಾಗುತ್ತಿದೆ. ಮೊದಲ ಎರಡೂ ವರೆ ವರ್ಷಗಳ ಕಾಲ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಾರೆ. ಬಳಿಕ ಇನ್ನುಳಿದ ಎರಡುವರೆ ವರ್ಷಗಳ ಕಾಲ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಮಾಹಿತಿ ಲಭ್ಯವಾಗುತ್ತಿದೆ.

ದೆಹಲಿಗೆ ತೆರಳಿರುವ ಡಿಕೆ ಶಿವಕುಮಾರ್ ಅವರಿಗೆ ಸೋನಿಯಾ ಗಾಂಧಿ ನೇರವಾಗಿ ಭೇಟಿಯಾಗಲು ಸಿಕ್ಕಿಲ್ಲ. ಆದರೆ ಫೋನಿನ ಮೂಲಕ ತಿಳಿಸಿದ್ದು, ಈಗ ಡಿಸಿಎಂ ಆಗಿ, ಇನ್ನೆರಡು ವರ್ಷ ಬಿಟ್ಟು ಸಿದ್ದರಾಮಯ್ಯ ಅವರು ಸಿಎಂ ಸ್ಥಾನವನ್ನು ಬಿಟ್ಟುಕೊಡಬೇಕು ಎಂದಿದ್ದಾರೆ ಎನ್ನಲಾಗಿದೆ.

