ಬೆಂಗಳೂರು: ಕರ್ನಾಟಕದ ಪರಿಸ್ಥಿತಿ ಬಗ್ಗೆ ಎಷ್ಟೇ ಹೇಳಿದರೂ ವಾಸ್ತವ ಸ್ಥಿತಿಯನ್ನು ಕಾವೇರಿ ಪ್ರಾಧಿಕಾರ ಅರ್ಥ ಮಾಡಿಕೊಳ್ಳುವುದಕ್ಕೆ ಹೋಗುತ್ತಿಲ್ಲ. ಇದೀಗ ಮತ್ತೆ ನೀರು ಬಿಡಬೇಕೆಂಬ ಸೂಚನೆ ನೀಡಿದೆ. ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ, ಇಂದು ಕರ್ನಾಟಕ ಬಂದ್ ಕೂಡ ಮಾಡಲಾಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ದಿಢೀರನೇ ಸಭೆ ನಡೆಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಕರೆದಿದ್ದು, ಡಿಸಿಎಂ ಡಿಕೆ ಶಿವಕುಮಾರ್, ವಕೀಲರು, ತಜ್ಞರು, ಸಚಿವರು, ನಿವೃತ್ತ ನ್ಯಾಯಾಧೀಶರು, ಅಡ್ವಕೇಟ್ ಜನರಲ್, ಹಿರಿಯ ವಕೀಲರು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆದಿದೆ. ಇದಕ್ಕೆ ಎಲ್ಲರಿಗೂ ಧನ್ಯವಾದಗಳು. ಸಭೆಯಲ್ಲಿ ಕಾನೂನು ತಜ್ಞರು ತಮ್ಮ ಸಲಹೆಗಳನ್ನು ನೀಡಿದ್ದಾರೆ. ಮುಖ್ಯವಾಗಿ ಸಲಹಾ ಸಮಿತಿ ರಚಿಸುವುದಕ್ಕೆ ಸಲಹೆ ನೀಡಲಾಗಿದೆ. ಮುಂದಿನ 18 ದಿನಗಳ ಕಾಲ ನಿತ್ಯ 3,000 ಕ್ಯೂಸೆಕ್ ನೀರು ಹರಿಸಿ ಎಂದು ಸೂಚನೆ ನೀಡಲಾಗಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದೇವೆ. ಮೇಕೆದಾಟು ನಿರ್ಮಾಣ ಬಗ್ಗೆ ಕೋರ್ಟ್ನಲ್ಲಿ ಪ್ರಸ್ತಾಪ ಮಾಡಲಿದ್ದೇವೆ ಎಂದಿದ್ದಾರೆ.