ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಮತ್ತು ಇಂದು ನಗರದಾದ್ಯಂತ ರೋಡ್ ಶೋ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮೋದಿ ಅವರಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಟ್ವೀಟ್ ಮೂಲಕ ಪ್ರಶ್ನೆ ಹಾಕಿದ್ದಾರೆ.
* ಯಾರು ಹೊಣೆ, ಪ್ರಧಾನ ಮಂತ್ರಿಯವರು ಕರ್ನಾಟಕದಲ್ಲಿಯೇ ಠಿಕಾಣಿ ಹೂಡಿ ಬಾಯಿತುಂಬಾ ಮಾತನಾಡುತ್ತಿದ್ದಾರೆ. ಆದರೆ ಇದೇ ಕರ್ನಾಟಕದ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರು ಪ್ರಧಾನಿಗಳಿಗೆ ಪತ್ರ ಬರೆಯುವಷ್ಟು ಇಲ್ಲಿ ಭ್ರಷ್ಟಚಾರ ತಾರಕಕ್ಕೇರಿದೆ. ಇದಕ್ಕೆಲ್ಲಾ ಯಾರು ಹೊಣೆ?
* ಅಪರಾಧ ಸಂಖ್ಯೆಗಳ ಹೆಚ್ಚಳ, ಕುಸಿದು ಬಿದ್ದಿರುವ ಮೂಲಸೌಕರ್ಯ ವ್ಯವಸ್ಥೆ ಮತ್ತು ಗುಂಡಿಬಿದ್ದ ರಸ್ತೆಗಳಿಂದಾಗಿ ಜಾಗತಿಕ ವಾಸಯೋಗ್ಯ ಸೂಚ್ಯಾಂಕದಲ್ಲಿ ಬೆಂಗಳೂರು ಕನಿಷ್ಠ ಶ್ರೇಣಿಗೆ ತಲುಪಿದೆ. ಇದಕ್ಕೆಲ್ಲಾ ಯಾರು ಹೊಣೆ?
* ಎನ್. ಸಿ. ಆರ್. ಬಿ ವರದಿ ಪ್ರಕಾರ ದೇಶದ ಮೆಟ್ರೋಪಾಲಿಟನ್ ನಗರಗಳಲ್ಲಿ ನಡೆಯುವ ಅಪರಾಧಗಳ ಪೈಕಿ 72% ಕಳ್ಳತನಗಳು ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಕಾರಣ ಬೆಂಗಳೂರು ನಗರ ಈಗ ಅಪರಾಧಗಳ ತಾಣವಾಗಿದೆ. ಇದಕ್ಕೆಲ್ಲಾ ಯಾರು ಹೊಣೆ?
* ಶೇಕಡಾ 48% ವಾಹನದಟ್ಟಣೆಯ ಪ್ರಮಾಣದಿಂದಾಗಿ ಬೆಂಗಳೂರು ನಗರ ದೇಶದಲ್ಲಿ ಎರಡನೇ ಅತ್ಯಂತ ಹೆಚ್ಚು ವಾಹನ ದಟ್ಟಣೆಯ ನಗರ ಎಂಬ ಕುಖ್ಯಾತಿಗೆ ಒಳಪಟ್ಟಿದೆ. ಇದರಿಂದಾಗಿ ನಗರವಾಸಿಗಳು ಮನೆಗಿಂತ ಹೆಚ್ಚಿನ ಸಮಯ ರಸ್ತೆಯಲ್ಲಿ ಕಳೆಯುವಂತಾಗಿದೆ. ಇದಕ್ಕೆಲ್ಲಾ ಯಾರು ಹೊಣೆ?
* ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ರೂಪಿಸಲಾಗಿರುವ ಮೇಕೆದಾಟು ಯೋಜನೆ ಅನುಮತಿ ನೀಡದೆ ಇರುವ ಕಾರಣದಿಂದಾಗಿ ನಗರದಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚಾಗುತ್ತಿದೆ. ನಗರದ ಜನ ಕುಡಿಯುವ ನೀರಿಗಾಗಿ ಖಾಸಗಿ ಬೋರ್ ವೆಲ್ ಮತ್ತು ಟ್ಯಾಂಕರ್ ನೀರನ್ನು ಬಳಸುತ್ತಿದ್ದಾರೆ. ಇದಕ್ಕೆಲ್ಲಾ ಯಾರು ಹೊಣೆ?
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲೆ ದೌರ್ಜನ್ಯದ ಪ್ರಮಾಣ 2021ರಲ್ಲಿ ಶೇಕಡಾ 18 ರಷ್ಟು ಹೆಚ್ಚಾಗುತ್ತಿದೆ. NDPS ಕಾಯ್ದೆಯಡಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ 1493% ರಷ್ಟು ಹೆಚ್ಚಾಗಿವೆ. 2021 ರಲ್ಲಿ ಇಮ್ಮೋರಲ್ ಟ್ರಾಪಿಕಿಂಗ್ ಶೇಕಡಾ 61 ರಷ್ಟು ಹೆಚ್ಚಾಗಿದೆ. ಇದಕ್ಕೆಲ್ಲಾ ಯಾರು ಹೊಣೆ? ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.