ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಗಾಗಿ ಮೂರು ಪಕ್ಷದವರು ಕಾಯುತ್ತಿದ್ದಾರೆ. ಅದಕ್ಕೂ ಮುನ್ನ ಟಿಕೆಟ್ ಗಾಗಿ ಆಕಾಂಕ್ಷಿಗಳು ಅರ್ಜಿ ಹಾಕುತ್ತಿದ್ದಾರೆ. ಇದೀಗ ಸಿದ್ದರಾಮಯ್ಯ ಕೂಡ ಕಾಂಗ್ರೆಸ್ ನಿಂದ ಟಿಕೆಟ್ ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅದರಲ್ಲೂ ಕಾಂಗ್ರೆಸ್ ನಲ್ಲಿ ಪ್ರತಿ ಜಿಲ್ಲೆಯಲ್ಲೂ ಆಕಾಂಕ್ಷಿಗಳ ಸಂಖ್ಯೆ ಹನುಮನ ಬಾಲ ಬೆಳೆದಂತೆ ಬೆಳೆದು ನಿಂತಿದೆ.
ಸಿದ್ದರಾಮಯ್ಯ ಅವರ ವಿಚಾರದಲ್ಲಿ ಎಲ್ಲರಿಗೂ ಕುತೂಹಲವಿದೆ. ಯಾಕಂದ್ರೆ ಸಿದ್ದರಾಮಯ್ಯ ಅವರಿಗೆ ಎಲ್ಲಾ ಕಡೆಯಿಂದಾನೂ ಆಹ್ವಾನವಿದೆ. ಹೀಗಾಗಿ ಸಿದ್ದರಾಮಯ್ಯ ಯಾವ ಕಡೆಗೆ ಹೋಗುತ್ತಾರೆ..? ಎಲ್ಲಿ ನಿಲ್ಲುತ್ತಾರೆ ಎಂಬ ಕುತೂಹಲ ಸಹಜವಾಗಿಯೇ ಇತ್ತು. ಅರ್ಜಿ ಹಾಕುವಾಗಾದರೂ ಈ ವಿಚಾರ ಬಯಲಾಗಬಹುದು ಎಂದುಕೊಂಡಿದ್ದರು. ಆದರೆ ಅದು ಈಗ ಸುಳ್ಳಾಗಿದೆ. ಜನರ ಕುತೂಹಲ ಈಗಲೂ ಹಾಗೇಯೆ ಇದೆ.
ಇಂದು ಕೆಪಿಸಿಸಿ ಕಾರ್ಯದರ್ಶಿ ಅವರಿಗೆ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿ ಬಂದಿದ್ದಾರೆ. ಆದರೆ ಅರ್ಜಿಯಲ್ಲಿ ಯಾವುದೇ ಕ್ಷೇತ್ರವನ್ನು ಮೆನ್ಶನ್ ಮಾಡಿಲ್ಲ. ಇದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಯಾಕಂದ್ರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲನ್ನು ಕಂಡಿದ್ದು, ಆ ಕಡೆಗೆ ಹೋಗುವುದಿಲ್ಲ. ಇನ್ನು ಬಾದಾಮಿ ತುಂಬಾ ದೂರ ಇದೆ ಅಲ್ಲಿನ ಸ್ಪರ್ಧೆ ದೂರದ ಮಾತು ಎನ್ನುವುದನ್ನು ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಸದ್ಯ ಇರುವ ಸುದ್ದಿ ಪ್ರಕಾರ ಸಿದ್ದರಾಮಯ್ಯ ಅವರು ಕೋಲಾರದಿಂದಾನೇ ನಿಲ್ಲಬಹುದು ಎನ್ನಲಾಗಿದೆ.