ಬೆಂಗಳೂರು: ಸಭೆಯೊಂದರಲ್ಲಿ ಮಾತನಾಡುವಾಗ ಹೇಳಿದ ಗಾದೆ ಮಾತಿನಿಂದ ಮಡಿವಾಳ ಸಮುದಾಯ ಬೇಸರ ಮಾಡಿಕೊಂಡಿತ್ತು. ಇದು ಸಿದ್ದರಾಮಯ್ಯನವರ ಗಮನಕ್ಕೆ ಬಂದಿದ್ದು, ಆ ಬಗ್ಗೆ ಕ್ಷಮೆಯನ್ನು ಯಾಚಿಸಿದ್ದಾರೆ. ಅದನ್ನೆಲ್ಲಾ ಬೇರೆ ರೀತಿಯಲ್ಲಿ ತಿಳಿದುಕೊಳ್ಳಬೇಡಿ ಎಂದಿದ್ದಾರೆ.
ಈ ಸಂಬಂಧ ತಮ್ನ ಅಧಿಕೃತ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ ಅವರು, ಚನ್ನರಾಯಪಟ್ಟಣದ ಸಭೆಯೊಂದರಲ್ಲಿ ಮಾಡಿದ ಭಾಷಣದಲ್ಲಿ ಬಳಸಿದ ಗಾದೆ ಮಾತುಗಳಿಂದ ಮಡಿವಾಳ ಸಮಾಜದ ನನ್ನ ಬಂಧುಗಳ ಮನಸ್ಸಿಗೆ ನೋವಾಗಿದೆ ಎಂದು ಗೊತ್ತಾಯಿತು. ಇದಕ್ಕಾಗಿ ವಿಷಾದಿಸುತ್ತೇನೆ.
ನಾನು ಯಾವುದೇ ಸಮುದಾಯ ಇಲ್ಲವೇ ವೃತ್ತಿಯನ್ನು ಅಗೌರವಿಸುವ ಉದ್ದೇಶದಿಂದ ಆಡಿದ ಮಾತಲ್ಲ.
ದುಡಿದು ತಿನ್ನುವ ಎಲ್ಲ ವೃತ್ತಿಗಳ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಮಡಿವಾಳ ಸಮಾಜವೂ ಸೇರಿದಂತೆ ಎಲ್ಲ ಹಿಂದುಳಿದ ಜಾತಿಗಳ ಸರ್ವಾಂಗೀಣ ಅಭಿವೃದ್ದಿಗೆ ನಾನು ಮಾಡಿದ ಕೆಲಸ ರಾಜ್ಯದ ಜನರಿಗೆ ಗೊತ್ತಿದೆ.
ಈ ಹಿನ್ನೆಲೆಯಲ್ಲಿ ಮಡಿವಾಳ ಸಮಾಜದ ಬಂಧುಗಳು ವಿವಾದವನ್ನು ಬೆಳೆಸಲು ಹೋಗದೆ ಸೌಹಾರ್ದತೆಯನ್ನು ಕಾಪಾಡಿಕೊಂಡು ಬರಬೇಕೆಂದು ಮನವಿ ಮಾಡುತ್ತಿದ್ದೇನೆ ಎಂದಿದ್ದಾರೆ.