ಭಾರತ ರತ್ನಕ್ಕಿಂತ ಮೀಗಿಲು ನಡೆದಾಡುವ ದೇವರು : ಮಾಜಿ ಸಚಿವ ಎಚ್.ಆಂಜನೇಯ…!

2 Min Read

 

 

ಭರಮಸಾಗರ,(ಏ.01) :  ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸ ಧೀಕ್ಷೆ ಪಡೆದು ಇಡೀ ತನ್ನ ಬದುಕನ್ನೇ ಬಡ ಮಕ್ಕಳ ಶಿಕ್ಷಣಕ್ಕೆ ಮೀಸಲಿಟ್ಟ ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಶ್ರೀಗಳು ಜನರ ಆರಾಧ್ಯ ಸ್ವಾಮೀಜಿ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಭರಮಸಾಗರದಲ್ಲಿ ಲಿಂಗಾಯತ ಸಮಾಜ ಸೇರಿ ವಿವಿಧ ಸಂಘಟನೆಗಳು ಶನಿವಾರ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಶ್ರೀಗಳ 116ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ದೇಶದಲ್ಲಿಯೇ ವಿಶೇಷವಾಗಿ ಗುರುತಿಸಿಕೊಂಡಿದೆ. ಅದರಲ್ಲೂ ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳು ಧಾರ್ಮಿಕ ಸ್ಥಾನದಲ್ಲಿ ಬಹಳ ಎತ್ತರದಲ್ಲಿ ನಿಂತಿವೆ. ಇದಕ್ಕೆ ಕಾರಣ ಈ ಪ್ರದೇಶದ ಮಠಾಧೀಶರು. ಬಹಳಷ್ಟು ಸ್ವಾಮೀಜಿಗಳು ತಮ್ಮ ಪ್ರದೇಶದಲ್ಲಿ ನೀರಾವರಿ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕವಾಗಿ ಕ್ರಾಂತಿ ಮಾಡಿದ್ದು, ಈ ಮೂಲಕ ನಾಡಿನ ಘನತೆ ಜೊತೆಗೆ ಮಧ್ಯಕರ್ನಾಟಕದ ಪ್ರಗತಿಗೆ ಶ್ರಮಿಸಿದ್ದಾರೆ ಎಂದರು.

ಸಿದ್ಧಗಂಗಾ ಶ್ರೀಗಳು ಲಕ್ಷಾಂತರ ಮಕ್ಕಳಿಗೆ ಅನ್ನ, ಅಕ್ಷರ, ಜ್ಞಾನ ದಾಸೋಹ ನೀಡಿದ ಮಹಾಪುರುಷರು. ವಿದ್ಯೆ ಕಡಿಮೆ ಇದ್ದರೂ ಪರವಾಗಿಲ್ಲ ನಡತೆ ಶುದ್ಧವಾಗಿರಬೇಕೆಂಬ ಗುರುಗಳು ಆದೇಶ ಪ್ರಸ್ತುತ ಸಮಾಜಕ್ಕೆ ಬಹಳ ಅಗತ್ಯವಾಗಿದೆ. ಅಕ್ಷರ ಕಲಿತಿದ್ದೇವೆ, ಬಹಳ ಬುದ್ಧಿವಂತಿಕೆ ಇದೆ ಎಂಬ ಕಾರಣಕ್ಕೆ ಅಹಂ ಹೊಂದಿದರೆ, ಅದು ನಮ್ಮ ಸಾಧನೆಗೆ ಅಡ್ಡಿಯಾಗಲಿದೆ ಎಂಬ ವಿವೇಚನೆ ಇರಬೇಕು ಎಂದು ಸಿದ್ಧಗಂಗಾ ಶ್ರೀಗಳು ಹೇಳುತ್ತಿದ್ದ ಮಾತು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.

ಪರಿಶುದ್ಧ ಮನಸ್ಸು, ಶುದ್ಧ ಆಹಾರ, ನಿಸ್ವಾರ್ಥ ಸೇವೆ ಮೂಲಕ ಜಗತ್ತಿನ ಗಮನಸೆಳೆದ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂಬುದು ಭಕ್ತರ ಬಹುದೊಡ್ಡ ಆಸೆ. ಆದರೆ, ಅದಕ್ಕಿಂತಲೂ ಮೀಗಿಲಾದ ‘ನಡೆದಾಡುವ ದೇವರು’ ಬಿರದು ಭಕ್ತರೇ ನೀಡಿದ್ದಾರೆ. ಜನರ ಪ್ರೀತಿ, ಭಕ್ತಿ, ನಂಬಿಕೆ, ವಿಶ್ವಾಸಕ್ಕಿಂತ ಮತ್ತೊಂದು ದೊಡ್ಡ ಪ್ರಶಸ್ತಿ ಜಗತ್ತಿನಲ್ಲಿ ಇಲ್ಲ ಎಂಬುದಕ್ಕೆ ಶ್ರೀಗಳನ್ನು ಜನರು ಗೌರವಿಸುತ್ತಿರುವುದೇ ಸಾಕ್ಷಿ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ಮಾತನಾಡಿ, ಸಾವಿರಾರು ಜಾತಿ, ಅನೇಕ ಧರ್ಮ, ವಿವಿಧ ಬಣ್ಣಗಳ ಜನರ ಭಾರತ ವಿಶ್ವದಲ್ಲಿಯೇ ವಿಶೇಷ್ಟ ಸ್ಥಾನ ಹೊಂದಿದೆ. ಇದಕ್ಕೆ ಮುಖ್ಯ ಕಾರಣ ಜಾತ್ಯತೀತ ತತ್ವ ಪಾಲನೆಯಲ್ಲಿ ಗಟ್ಟಿತನ ಹೊಂದಿರುವುದು ಎಂದು ಹೇಳಿದರು.

ಮುಖಂಡರಾದ ಚವಲಿಹಳ್ಳಿ ನಾಗೇಂದ್ರಪ್ಪ, ಲಿಂಗಾನಾಗ್ತಿಹಳ್ಳಿ ತಿಪ್ಪೇಸ್ವಾಮಿ, ಜಿಪಂ ಮಾಜಿ ಸದಸ್ಯ ಆರ್.ಕೃಷ್ಣಮೂರ್ತಿ ಮಾತನಾಡಿ, ಧೀರ್ಘಾಯುಸ್ಸು ಹೊಂದಿದ್ದ ಸಿದ್ಧಗಂಗಾ ಶ್ರೀಗಳು, ತಮ್ಮ ಕೊನೇ ಉಸಿರು ಇರುವವರೆಗೂ ಬಡ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು, ಅವರೊಂದಿಗೆ ಬೇರೆಯುತ್ತಿದ್ದ ಕ್ಷಣಗಳು ಅಪರೂಪ. ನಿಜಕ್ಕೂ ಜನರ ಪಾಲಿಗೆ ಶ್ರೀಗಳು ನಡೆದಾಡುವ ದೇವರೇ ಆಗಿದ್ದರು ಎಂದು ಸ್ಮರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಕರಿಬಸಪ್ಪ, ಮುಖಂಡರಾದ ಎಂ.ಟಿ.ಬಿ.ಮಂಜುನಾಥ್, ರಂಗವ್ವನಹಳ್ಳಿ ಹನುಮಂತಪ್ಪ, ಮೌನೇಶ್, ಮಂಜುನಾಥ್, ಜಹೀರ್, ಕುಬೇರ ನಾಯ್ಕ, ಲಿಂಗಾಯತ ಯುವ ವೇದಿಕೆ ರಾಜ್ಯ ಕಾರ್ಯದರ್ಶಿ ಎಚ್.ಎನ್.ಪ್ರವೀಣ್, ಬಸವರಾಜ್, ಮರುಳಸಿದ್ದಪ್ಪ,ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ದುರುಗೇಶ್ ಪೂಜಾರ್ ಇತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *