ಚಿತ್ರದುರ್ಗ, ಮಾರ್ಚ್01: ಮಹಾಪುರುಷರು ತೋರಿದ ಸಮಾನತೆಯ ಹಾದಿ ಇಂದಿನ ಸಮಾಜಕ್ಕೆ ಅವಶ್ಯಕವಾಗಿದ್ದು, ದಾರ್ಶನಿಕರ ತತ್ವಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯಲ್ಲಿ ಅವರು ಮಾತನಾಡಿದರು.
ರೇಣುಕಾಚಾರ್ಯ ಸೇರಿದಂತೆ ಅನೇಕ ದಾರ್ಶನಿಕರು ಅಂದಿನ ಕಾಲದ ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡಿ ಸಮಾನತೆಯ ಸಂದೇಶ ಸಾರಿದ್ದಾರೆ. ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಉಪವಿಭಾಗಾಧಿಕಾರಿ ಕಾಂತರಾಜ್ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ಧರ್ಮಾಚರಣೆಗಾಗಿ ಸಾರಿದ ದಶಸೂತ್ರಗಳು ಇಡೀ ವಿಶ್ವದ ಶಾಂತಿ ಮತ್ತು ನೆಮ್ಮದಿಗೆ ದಾರಿದೀಪವಾಗಿವೆ. ರೇಣುಕಾಚಾರ್ಯರು ಧರ್ಮಾಚರಣೆಗಾಗಿ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯೆ, ದಯೆ, ಕ್ಷಮೆ, ದಾನ, ಶಿವಪೂಜೆ, ಪಂಚಾಕ್ಷರಿ ಮಂತ್ರ ಜಪದಂತಹ ಹತ್ತು ಸೂತ್ರಗಳು ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಸುತ್ತವೆ. ಇವುಗಳನ್ನು ಪಾಲಿಸುವುದರಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಹೇಳಿದರು.
ಮನುಷ್ಯರಲ್ಲಿ ನಮಗೆ ಒಳ್ಳೆಯದು ಮಾಡಿದವರಿಗೆ ಒಳ್ಳೆಯದನ್ನು ಮಾಡುವುದು ಸಹಜ ಗುಣ. ಇದು ಮಾನವನ ಲಕ್ಷಣ. ಆದರೆ ಯಾರೂ ಏನೂ ಮಾಡದಿದ್ದರೂ ಲೋಕಕ್ಕೆ ಹಿತವನ್ನೇ ಬಯಸುವವನು ಮಹಾಮಾನವ ಎನಿಸಿಕೊಳ್ಳುತ್ತಾನೆ. ಇವೆಲ್ಲಕ್ಕಿಂತ ಮಿಗಿಲಾಗಿ ತನಗೆ ಕೆಟ್ಟದನ್ನು ಮಾಡಿದವರಿಗೂ ಮರಳಿ ಒಳಿತನ್ನೇ ಮಾಡುವವನು ದೇವ ಮಾನವ ಎಂದು ಬೋಧಿಸಿದ್ದಾರೆ. ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಂದೇಶ ನೀಡಿದ ಅವರು, ಧರ್ಮದಿಂದ ವಿಶ್ವಕ್ಕೆ ಶಾಂತಿ. ಧರ್ಮವು ಜನರ ಕಲ್ಯಾಣಕ್ಕಾಗಿ ಇರಬೇಕು. ಪ್ರಪಂಚದಲ್ಲಿ ಶಾಂತಿ ನೆಲೆಸಲು ಧರ್ಮದಿಂದ ಮಾತ್ರ ಸಾಧ್ಯ ಎಂದು ತಿಳಿಸಿದ್ದಾರೆ ಎಂದರು.
ಶ್ರೀ ಜಗದ್ಗುರು ರೇಣುಕಾಚಾರ್ಯರ ಕುರಿತು ಉಪನ್ಯಾಸ ನೀಡಿದ ಸಾಹಿತಿ ನಿರಂಜನ ದೇವರ ಮನೆ, ಶ್ರೀ ರೇಣುಕಾಚಾರ್ಯರು ಶಿವಾದ್ವೈತ ಸಿದ್ದಾಂತ ಪ್ರತಿಪಾದಿಸುವ ಮುಖೇನ ಈ ಜಗತ್ತಿಗೆ ಮಾನವ ಧರ್ಮ ಮತ್ತು ವಿಶ್ವಶಾಂತಿಯ ಸಂದೇಶ ಸಾರಿದ ಶ್ರೇಷ್ಠ ಆಚಾರ್ಯರು. ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹಿಷ್ಣುತೆ, ಸಾಮರಸ್ಯ ಹಾಗೂ ಸಹಬಾಳ್ವೆಯಂತಹ ಉದಾತ್ತ ಮೌಲ್ಯ, ಚಿಂತನೆಗಳನ್ನು ಬೋಧಿಸಿದ ಯುಗಪುರುಷರು ಎಂದು ಹೇಳಿದರು.
ಚಿಂತನೆ-ಅರಿವು-ಅನುಭಾವದ ಮೂಲಕ ವ್ಯಕ್ತಿಯ ವಿಕಾಸ ಮತ್ತು ಸಮಾಜಾಭಿವೃದ್ಧಿಯನ್ನು ಬಯಸಿದವರು. ಧರ್ಮ ಮತ್ತು ಸಂಸ್ಕøತಿಯನ್ನು ಕೇವಲ ಲೌಕಿಕ ಬದುಕಿನ ಸಮೃದ್ಧಿಯ ಮನೋಭಾವಗಳಿಗೆ ಬಳಸಿಕೊಳ್ಳದೇ ಮನುಷ್ಯನ ಆಧ್ಯಾತ್ಮಿಕ ವಿಕಾಸಕ್ಕೆ ಮಹತ್ವದ ಶಕ್ತಿಯನ್ನಾಗಿ ರೂಪಿಸಿದರು. ಮನುಷ್ಯನ ಪ್ರಜ್ಞೆಯನ್ನು ಬೆಳೆಸಿಕೊಂಡು ಮಾನವೀಯ ನೆಲೆಯಲ್ಲಿ ಸಂಘಟನೆಯಾಗಿ ಎಲ್ಲರೂ ಪರಿಪೂರ್ಣತೆ ಸಾಧಿಸಿ ಜೀವನ್ಮುಕ್ತಿ ಪಡೆಯುವಂತೆ ತಿಳಿಸಿದವರು ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರ ಜಯಂತಿಯು ಕೇವಲ ವೇದಿಕೆಯ ಭಾಷಣಗಳಿಗೆ ಸೀಮಿತವಾಗಬಾರದು. ಅವರ ವಿಶ್ವ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಉದಾತ್ತ ಸಂದೇಶ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದು ತಿಳಿಸಿದ ಅವರು, ರೇಣುಕಾಚಾರ್ಯರು ಸಾರಿದ “ವಿಶ್ವ ಮಾನವ ಧರ್ಮ”ದ ತತ್ವಗಳನ್ನು ಪ್ರತಿಯೊಬ್ಬರು ಮನದಟ್ಟು ಮಾಡಿಕೊಂಡು ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷ ಎಂ.ಪಿ.ಮಲ್ಲಿಕಾರ್ಜುನಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಕಾರ್ಯದರ್ಶಿ ಶಶಿಧರ್ ಬಾಬು, ಖಚಾಂಚಿ ರುದ್ರಪ್ಪ ಜಾಲಿಕಟ್ಟೆ, ಯುವಘಟಕದ ಅಧ್ಯಕ್ಷ ದಿನೇಶ್ ಮೈಲಹಳ್ಳಿ, ಪಂಚಚಾರ್ಯ ಸಹಕಾರ ಪತ್ತಿನ ಸಂಘದ ಅಧ್ಯಕ್ಷ ಷಡಾಕ್ಷರಯ್ಯ, ಪ್ರವೀಣ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಚಿತ್ರದುರ್ಗ ತಾಲ್ಲೂಕು ಆಯಿತೋಳು ವಿರೂಪಾಕ್ಷಪ್ಪ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.




