ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729
ಸುದ್ದಿಒನ್, ಚಳ್ಳಕೆರೆ, ಸೆಪ್ಟೆಂಬರ್. 03 : ಮಧ್ಯ ಕರ್ನಾಟಕದ ಎರಡನೇ ಅತಿ ದೊಡ್ಡ ಜಾತ್ರೆ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆ ಇಂದು ಲಕ್ಷಾಂತರ ಭಕ್ತರ ನಡುವೆ ಅದ್ದೂರಿಯಾಗಿ ಜರುಗಿತು.
ಚಿತ್ರದುರ್ಗ ಜಿಲ್ಲೆಯೆ ಚಳ್ಳಕೆರೆ ತಾಲೂಕಿನ ಪ್ರಸಿದ್ಧ ಗೌರಸಮದ್ರದ ಶ್ರೀ ಮಾರಮ್ಮದೇವಿ ಜಾತ್ರೆ ಸಹಸ್ರಾರು ಭಕ್ತ ಸಾಗರದ ನಡುವೆ ಮಂಗಳವಾರ ಸಂಭ್ರಮ ಸಡಗರದಿಂದ ನಡೆಯಿತು.
ಮಧ್ಯಾಹ್ನ 12.30ರ ಸುಮಾರಿಗೆ ಗ್ರಾಮದ ಗರ್ಭ ಗುಡಿಯಿಂದ ಜಾತ್ರೆ ನಡೆಯುವ ಸ್ಥಳಕ್ಕೆ ಮೆರವಣೆಗೆ ಮೂಲಕ ದೇವಿಯ ಉತ್ಸವ ಮೂರ್ತಿಯನ್ನು ಜನಪದ ಕಲಾ ವಾದ್ಯಮೇಳದೊಂದಿಗೆ ಹೊತ್ತು ತರಲಾಯಿತು.
ಈ ಸಂದರ್ಭದಲ್ಲಿ ಭಕ್ತರು ಸೂರು ಬೆಲ್ಲ, ಮೆಣಸು, ಮಂಡಕ್ಕಿ ಉತ್ಸವ ಮೂರ್ತಿಯ ಮೇಲೆ ಚೆಲ್ಲಿದರು. ಹಸಿ ತರಕಾರಿ, ಈರುಳ್ಳಿ, ಬಾಳೆಹಣ್ಣು ಮತ್ತು ಕೋಳಿಮರಿಗಳ ದೇವಿ ಮೇಲೆ ತೂರಿ ಭಕ್ತರು ಹರಕೆ ತೀರಿಸಿದರು.
ಮಾರಿದೇವತೆ ತವರು ಮನೆಯಾದ ನಿಡಗಲ್ಲಿನಿಂದ ತಂದಿದ್ದ ಮೀಸಲು ಹಸಿಹಾಲು, ಬೆಳ್ಳಿ ಕಣ್ಣು, ಕೋರೆ ಮೀಸೆ ದೇವಿಗೆ ಅರ್ಪಿಸಿದರು.
ತುಮಲಿನ ಮಾರಮ್ಮನ ದೇವಸ್ಥಾನಕ್ಕೆ ಭಕ್ತರು ಮೂರು ಸುತ್ತು ಪ್ರದಕ್ಷಿಣೆ ಹಾಕಿ, ಬೊಮ್ಮಲಿಂಗ ದೇವರ ದೀಪದ ಕಂಬಕ್ಕೆ ಎಣ್ಣೆ ದೀಪ ಹಚ್ಚಿ ತಮ್ಮ ಕಷ್ಟಗಳನ್ನು ಪರಿಹರಿಸುವಂತೆ ಪ್ರಾರ್ಥಿಸಿದರು.
ನಂತರ ಮಾರಮ್ಮ ದೇವಿಯನ್ನು ಕಟ್ಟೆಯ ಮೇಲೆ ಕೂರಿಸಲಾಯಿತು. ಅಲ್ಲಿಗೆ ಮಂಗಳವಾರದ ವಿಶೇಷ ಆಕರ್ಷಣೆಯ ದೊಡ್ಡ ಜಾತ್ರೆ ಕೊನೆಗೊಂಡಿತು.
ಜಾತ್ರೆಗೆ ಕರ್ನಾಟಕ ಸೇರಿದಂತೆ ಆಂದ್ರಪದೇಶ ಸೇರಿದಂತೆ ವಿವಿಧ ಕಡೆಯಿಂದ ಜನಸಾಗರವೇ ಹರಿದು ಬಂದಿತು.
ದ್ವಿಚಕ್ರ ವಾಹನ ಸೇರಿದಂತೆ ಇತರೆ ವಾಹನಗಳ ಸಂಖ್ಯೆ ಹೆಚ್ಚಾದ ಕಾರಣ ಸುಮಾರು 4 ಕಿಮೀ ದೂರದವರೆಗೆ ವಾಹನ, ಎತ್ತಿನಗಾಡಿಗಳು ಸಾಲಾಗಿ ನಿಂತಿದ್ದವು.
ಬೇವಿನ ಸೇವೆ, ಪ್ರಾಣಿ ಬಲಿ ನಿಷೇಧ ಮಾಡಿದ್ದರಿಂದ ತುಮಲಿಗೆ ದೇವಿ ಬರುವ ಮುನ್ನವೇ ಕೆಲವರು ದೇವಿಯ ದರ್ಶನ ಪಡೆದು, ಸುಮಾರು 3 ಕಿಮೀ ದೂರದಲ್ಲಿ ಗಿಡಗಂಟೆಗಳ ಮಧ್ಯೆ ಪ್ರಾಣಿಬಲಿ ಮಾಡುವ ಮೂಲಕ ಹರಕೆ ತೀರಿಸಿದರು.
ಹೊಲಗಳಲ್ಲಿಯೇ ದೇವಿಗೆ ನೈವೇದ್ಯ ಅರ್ಪಿಸುತ್ತಿರುವುದು ಕಂಡು ಬಂದಿತು. ತಾಲೂಕು ಆಡಳಿತ ಹಾಗೂ ರಕ್ಷಣಾ ಇಲಾಖೆ ಈ ಬಾರಿ ಜಾತ್ರೆಗೆ ಬಂದ ಭಕ್ತರಿಗೆ ಕುಡಿವ ನೀರು ಸೇರಿದಂತೆ ದೇವಿಯ ದರ್ಶನ ಪಡೆಯಲು ತುಮಲಿನ ದೇವಸ್ಥಾನದ ಬಳಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿತ್ತು ಪೋಲೀಸ್ ಬಂದು ಬಸ್ಸು ವ್ಯವಸ್ಥೆ ಕಲ್ಪಿಸಲಾಗಿತ್ತು.
ಶಾಸಕರಾದ ಟಿ.ರಘುಮೂರ್ತಿ, ಎನ್.ವೈ.ಗೋಪಾಲಕೃಷ್ಣ, ಜಿಲ್ಲಾಧಿಕಾರಿ ವೆಂಕಟೇಶ್, ತಹಶೀಲ್ದಾರ್ ರೇಹಾನ್ ಪಾಷ, ತಾಪಂ ಇಒ ಶಶಿಧರ್, ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲಿಸ್ ಇಲಾಖೆ ಅಧಿಕಾರಿಗಳು, ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.