ವರದಿ : ಸುರೇಶ್ ಪಟ್ಟಣ್
ಚಿತ್ರದುರ್ಗ (ನ.13) : ವಿರೋಧ ಪಕ್ಷದವರು ಏನಾದರೂ ಆರೋಪ ಮಾಡುವಾಗ ಅದಕ್ಕೆ ತಕ್ಕಂತೆ ಆಧಾರವನ್ನು ನೀಡಬೇಕು ಇಲ್ಲವಾದಲ್ಲಿ ಆರೋಪ ಮಾಡುವುದನ್ನು ನಿಲ್ಲಿಸಬೇಕೆಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಕಿವಿ ಮಾತು ಹೇಳಿದ್ದಾರೆ.
ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿರೋಧ ಪಕ್ಷ ಇದೆ ಎಂದು ಜನತೆಗೆ ಗೊತ್ತಾಗಬೇಕೆಂದು ಈ ರೀತಿಯಾದ ಆಧಾರ ರಹಿತವಾದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ನಿಜವಾಗಿಯೂ ಆರೋಪ ಮಾಡುವುದಾದರೆ ಅದಕ್ಕೆ ತಕ್ಕ ಸಾಕ್ಷಿಗಳನ್ನು ನೀಡಿ ಆರೋಪಿಸಲಿ ಎಂದು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಸವಾಲ್ ಹಾಕಿದರು.
ಬೆಟ್ ಕಾಯಿನ್‍ದಡಿಯಲ್ಲಿ ಮುಖ್ಯಮಂತ್ರಿಗಳು ಸ್ಥಾನವನ್ನು ಕಳೆದುಕೊಳ್ಳುತ್ತಾರೆ ಎಂಬ ಕಾಂಗ್ರೇಸ್ ಪಕ್ಷದವರ ಆರೋಪ ನಿರಾಧಾರವಾದದ್ದು, ಇದರಲ್ಲಿ ಮುಖ್ಯಮಂತ್ರಿಗಳ ಪಾತ್ರ ಏನು ಇಲ್ಲ, ಬೊಮ್ಮಾಯಿಯವರು ಉತ್ತಮವಾದ ಆಡಳಿತವನ್ನು ನೀಡಿದ್ದಾರೆ. ಇದನ್ನು ಅವರ ತಂದೆಯಿಂದ ಕಲಿತ್ತಿದ್ದಾರೆ ಇದರಿಂದ ರಾಜ್ಯಕ್ಕೆ ಉತ್ತಮವಾದ ಆಡಳಿತವನ್ನು ನೀಡುತ್ತಿದ್ದಾರೆ. ಜನತೆಯೂ ಸಹಾ ಅವರನ್ನು ಮೆಚ್ಚಿಕೊಂಡು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.
ಕಾಂಗ್ರೆಸ್ ಮಾಡಿರುವ ಆರೋಪದ ಬಗ್ಗೆ ಅಗತ್ಯ ಬಿದ್ದರೆ ತನಿಖೆಯನ್ನು ಸಹಾ ಮಾಡಲಾಗುವುದು ಅಗ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ, ಸಿ.ಎಂ.ನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ, ಮುಂದಿನ ಚುನಾವಣೆಯಲ್ಲಿ ಬಿಜೆಪಿ 140 ಸ್ಥಾನವನ್ನು ಗಳಿಸುವುದರ ಮೂಲಕ ಅಧಿಕಾರವನ್ನು ಹಿಡಿಯುವುದರಲ್ಲಿ ಯಾವುದೇ ಆನುಮಾನ ಬೇಡ ಎಂದು ಆತ್ಮ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಜಗದೀಶ ಶಟ್ಟರ್ ರವರು ದೆಹಲಿಗೆ ಹೋಗಿರುವುದರಲ್ಲಿ ರಾಜಕೀಯ ಏನು ಇಲ್ಲ, ಇದು ಅವರ ವ್ಯಯುತ್ತಿಕವಾದ ಭೇಟಿಯಾಗಿದೆ ಇದಕ್ಕೆ ವಿಶೇಷವಾದ ಅರ್ಥ ಕಲ್ಪಿಸುವುದು ಬೇಡ ಎಂದ ಶಾಸಕ ತಿಪ್ಪಾರೆಡ್ಡಿ, ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಇನ್ನೂ 2-3 ದಿನದಲ್ಲಿ ತನ್ನ ಅಭ್ಯರ್ಥಿಗಳನ್ನು ಪ್ರಕಟ ಮಾಡಲಿದೆ ಎಂದು ತಿಳಿಸಿ ಈ ಬಾರಿಯೂ ಸಹಾ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸುವುದಿಲ್ಲ ಎನ್ನುವ ರಘು ಆಚಾರ್ ರವರೇ ಚುನಾವಣೆಯಲ್ಲಿ ಅಧಿಕೃತವಾಗಿ ಅಭ್ಯರ್ಥಿಗಳಾಗಲಿದ್ದಾರೆ ಎಂದು ತಿಪ್ಪಾರೆಡ್ಡಿ ಭವಿಷ್ಯ ನುಡಿದರು.