ಸುದ್ದಿಒನ್, ನವದೆಹಲಿ, ಜೂ.02 : ಭಾರತದಾದ್ಯಂತ ಸುಮಾರು 1,100 ಟೋಲ್ ಪ್ಲಾಜಾಗಳಲ್ಲಿ ಟೋಲ್ ತೆರಿಗೆಗಳನ್ನು ಹೆಚ್ಚಿಸಲಾಗಿದೆ. ಸರಾಸರಿ 5 ಪ್ರತಿಶತದಷ್ಟು ಟೋಲ್ ಶುಲ್ಕವನ್ನು NHAI ಹೆಚ್ಚಿಸಿದೆ. ಪ್ರತಿ ವರ್ಷ ಏಪ್ರಿಲ್ 1 ರಿಂದ ಟೋಲ್ ದರವನ್ನು ಶೇಕಡಾ 5 ರಷ್ಟು ಹೆಚ್ಚಿಸಲಾಗುತ್ತದೆ. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಬೆಲೆ ಏರಿಕೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.
ಏಪ್ರಿಲ್ 1 ರಿಂದ ಟೋಲ್ ಶುಲ್ಕವನ್ನು ಹೆಚ್ಚಿಸಲು NHAI ನಿರ್ಧರಿಸಿತ್ತು ಆದರೆ, ಈ ನಿರ್ಧಾರವನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಚುನಾವಣಾ ಆಯೋಗದ ಗಮನಕ್ಕೆ ತಂದಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಶುಲ್ಕ ಏರಿಕೆ ನಿರ್ಧಾರವನ್ನು ಮುಂದೂಡುವಂತೆ ಚುನಾವಣಾ ಆಯೋಗ ಎನ್‌ಎಚ್‌ಎಐಗೆ ಸೂಚಿಸಿತ್ತು. ಆದರೆ ಇದೀಗ ಕೊನೆಯ ಹಂತದ ಮತದಾನ ಮುಗಿದಿದ್ದು, ಟೋಲ್ ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಿ NHAI ಆದೇಶ ಹೊರಡಿಸಿದೆ. ಟೋಲ್ ದರಗಳ ಪರಿಷ್ಕರಣೆಯು ಜೂನ್ 3 ರಿಂದ ಜಾರಿಗೆ ಬರಲಿದೆ” ಎಂದು ಎನ್‌ಎಚ್‌ಎಐ ತಿಳಿಸಿದೆ.
ಟೋಲ್ ತೆರಿಗೆಯು ಕೆಲವು ಅಂತರರಾಜ್ಯ ಎಕ್ಸ್‌ಪ್ರೆಸ್‌ವೇಗಳು, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಮೂಲಕ ಹಾದುಹೋಗುವಾಗ ವಾಹನ ಚಾಲಕರು ಪಾವತಿಸಬೇಕಾದ ಶುಲ್ಕವಾಗಿದೆ. ಅವು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿಯಂತ್ರಣಕ್ಕೆ ಒಳಪಡುತ್ತವೆ. ಪಾದಚಾರಿಗಳಿಗೆ ಮತ್ತು ದ್ವಿಚಕ್ರ ವಾಹನಗಳಿಗೆ ಟೋಲ್ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ.