Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಿವರಾತ್ರಿ ಮಹೋತ್ಸವ | ಕೋಟೆನಾಡಿನಲ್ಲಿರುವ ಪ್ರಮುಖ ಶಿವನ ದೇಗುಲಗಳು ಮಾಹಿತಿ ಇಲ್ಲಿದೆ…!

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.08 : ಮುದ್ದೆಯಂತ ಊಟವಿಲ್ಲ ಸಿದ್ದಪ್ಪನಂತ ದೇವರಿಲ್ಲ, ಶಿವ ಶಿವ ಎಂದರೆ ಭಯವಿಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ… ಹೀಗೇ ಅನೇಕ ರೀತಿ ನಮ್ಮ ಪೂರ್ವಿಕರು ಶಿವನ ಕುರಿತು ತಮ್ಮದೇ ಭಾಷೆಯಲ್ಲಿ, ಭಕ್ತಿ ಭಾವದಲ್ಲಿ ಸ್ಮರಿಸುತ್ತಾರೆ. ಆಡಂಬರ ಬಯಸದ ಸರ್ವರ ಪೂಜೆಗೂ ಸಲ್ಲುವ ದೈವ ಎಂಬ ನಂಬಿಕೆ ಜನರ ಮನದಲ್ಲಿ ದಟ್ಟವಾಗಿದೆ.

ಈ ಕಾರಣಕ್ಕೆ ಶಿವನ ಆರಾಧನೆ ವಿಶೇಷತೆ ಪಡೆದುಕೊಂಡಿದೆ. ಶಿವನ ದೇವಾಲಯಗಳು ಇಲ್ಲದ ಊರುಗಳೇ ಇಲ್ಲ ಎನ್ನಬಹುದು. ಅದರಲ್ಲೂ ಶಿವನ ಆರಾಧನೆಗಾಗಿಯೇ ಶಿವರಾತ್ರಿ ಮಹೋತ್ಸವದಲ್ಲಿ ಭಾರತದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.

ಶಿವರಾತ್ರಿ ಆಚರಣೆ ಕುರಿತು ಹಿನ್ನೆಲೆಯಿದ್ದು, ಅನೇಕ ಕಥೆಗಳು ಜನಪದರ ಬಾಯಲ್ಲಿ ಹರಿದಾಡುತ್ತವೆ. ಈಶ್ವರನು ಪಾರ್ವತಿ ದೇವಿಯನ್ನು ವಿವಾಹವಾದ ದಿನವೇ ಶಿವರಾತ್ರಿ ಎಂಬುದು ನಂಬಿಕೆ.

ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಜಗತ್ತಿನ ರಕ್ಷಣೆಗಾಗಿ ಶಿವನು ವಿಷ ಕುಡಿಯುತ್ತಾನೆ. ಆ ವಿಷ ಗಂಟಲ ಕೆಳಗೆ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಮಹಿಮೆ. ಈ ಕಾರಣಕ್ಕೆ ಶಿವನನ್ನು ವಿಷಕಂಠನೂ ಎಂದು ಕರೆಯಲಾಗುತ್ತದೆ.

ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸುತ್ತಾನೆ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎಂಬುದು ಮತ್ತೊಂದು ಪುರಾಣ. ಇನ್ನು, ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ. ಶಿವರಾತ್ರಿ ದಿನದಂದು ಉಪವಾಸ ವ್ರತ ಕೈಗೊಳ್ಳುವುದು ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿದ್ದು, ಉಪವಾಸದ ಮೂಲಕ ಮನುಷ್ಯನ ಆರೋಗ್ಯ ವೃದ್ಧಿಯಾಗಲಿದೆ.

ಜನರ ಆರಾಧ್ಯ ದೈವವಾದ ಶಿವನ ದೇವಾಲಯಗಳು ಕೋಟೆನಾಡು ಚಿತ್ರದುರ್ಗದಲ್ಲಿ ನೂರಾರು ಇವೆ. ಈ ಪ್ರದೇಶ ಶೈವಪಂಥದ ಭೂಮಿ ಎಂಬುದಕ್ಕೆ ಇಲ್ಲಿನ ಅನೇಕ ದೇಗುಲಗಳು ಸಾಕ್ಷಿಯಾಗಿವೆ. ಈ ಕುರಿತು ವೃತ್ತಿಯಲ್ಲಿ ದಂತ ವೈದ್ಯರು ಆಗಿರುವ ಡಾ.ಸಂತೋಷ್ ಹೊಳಲ್ಕೆರೆ ಅವರು ಪ್ರಮುಖವಾಗಿರುವ ಶಿವನ ದೇವಾಲಯಗಳನ್ನು ಪರಿಚಯಿಸಿರುವ ಅಧ್ಯಯನದ ಬರಹ ಶಿವರಾತ್ರಿ ಹಬ್ಬದ ದಿನದಂದು ಸುದ್ದಿಒನ್ ಓದುಗರಿಗಾಗಿ ವಿಶೇಷವಾಗಿ ಇಲ್ಲಿ ನೀಡಲಾಗಿದೆ.

 

ಚಿತ್ರದುರ್ಗದ ಪ್ರಾಚೀನ ಶಿವಾಲಯಗಳು

ವಿಶೇಷ ಲೇಖನ
ಡಾ. ಕೆ.ವಿ. ಸಂತೋಷ್
ದಂತ ವೈದ್ಯರು, ಚಿತ್ರದುರ್ಗ
ಮೊ : 9342466936

ಚಿತ್ರದುರ್ಗ ಜಿಲ್ಲೆಯು ಹಿಂದಿನಿಂದಲೂ ಧಾರ್ಮಿಕ ಐತಿಹ್ಯ ಹೊಂದಿರುವ ಒಂದು ಪ್ರಮುಖ ಸ್ಥಳ. ಹಿಂದಿನಿಂದಲೂ ಇಲ್ಲಿ ನೂರಾರು ಶಿವಾಲಯಗಳನ್ನು ನಿರ್ಮಾಣ ಮಾಡಲಾಗಿತ್ತು. ಕೆಲವನ್ನು ಆಡಳಿತಗಾರರು, ರಾಜ ಪ್ರಮುಖರು ಸ್ಥಾಪನೆ  ಮಾಡಿದರೆ  ಕೆಲವನ್ನು ಗುರುಗಳು, ಸಾಮಾನ್ಯ ಜನರು ಧಾರ್ಮಿಕ ಶ್ರದ್ಧೆಯಿಂದ ಶಿವ ದೇವಾಲಯಗಳ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ.

ಶಿವಲಿಂಗ ಸ್ಥಾಪನೆಯ ಜೊತೆಗೆ ಈ ಶಿವಾಲಯಕ್ಕೆ ಬೇಕಾಗುವ ದೈನಂದಿನ ಖರ್ಚುಗಳಿಗೆ ತಮ್ಮ ಕೈಲಾದ ಮಟ್ಟಿಗೆ ದಾನ ದತ್ತಿಗಳನ್ನು ನೀಡಿದ್ದಾರೆ. ಚಿತ್ರದುರ್ಗ ನಗರಕ್ಕೆ ಸೀಮಿತವಾಗಿ ಹತ್ತಾರು ಬಡಾವಣೆಗಳು ಇಂದು ನಗರದ ವ್ಯಾಪ್ತಿಯೊಳಗೆ ಬಂದಿದ್ದರೂ ಹಿಂದೆಲ್ಲ ಈ ಬಡಾವಣೆಗಳು ನಗರದ ಹೊರಗಿನ ಗ್ರಾಮಗಳಾಗಿದ್ದವು. ಅಲ್ಲಿನ ದೇವಾಲಯಗಳ ಜೊತೆಗೆ
ಚಿತ್ರದುರ್ಗ ನಗರ ಅದರ ಅಕ್ಕ ಪಕ್ಕದ ಸ್ಥಳಗಳ ಶಿವಾಲಯಗಳ  ಕಿರು ಪರಿಚಯ ಇಲ್ಲಿದೆ.

ಚಿತ್ರದುರ್ಗ ಕೋಟೆಯ ಒಳಗೆ, ಕೋಟೆ ಪ್ರದೇಶದಲ್ಲಿ  ಇರುವ ಶಿವಾಲಯಗಳು.

ಗಾರೇಬಾಗಿಲ ಈಶ್ವರನ ಗುಡಿ:

ಚಿತ್ರದುರ್ಗದ ಕೋಟೆ ರಸ್ತೆಯಲ್ಲಿರುವ ಗಾರೆ ಸುತ್ತಿನ ಕೋಟೆ ಬಾಗಿಲ ಬಳಿಯಲ್ಲಿ ಈ ದೇವಾಲಯವಿದೆ. ಪಾಳೆಯಗಾರರ ಕಾಲದ ಶಿವಾಲಯ ಇದಾಗಿದೆ.

ಯಜ್ಞೇಶ್ವರನ ದೇವಾಲಯ: ಕೋಟೆಯ ಟೀಕಿನ ಬಾಗಿಲು ಮಹಾದ್ವಾರದಿಂದ ಒಳಗೆ ಎಡ ಭಾಗದ ಹುಟ್ಟು ಬಂಡೆಯ ಮೇಲೆ ಈ ದೇವಾಲಯವಿದೆ. ಪಾಳೆಯಗಾರರ ಕಾಲದ ದೇವಾಲಯ ಇದಾಗಿದೆ.

ಪಾತಾಳೇಶ್ವರ ದೇವಾಲಯ:

ಕೋಟೆ ರಸ್ತೆಯ ಆನೆಬಾಗಿಲ ಬಳಿ ಈ ದೇವಾಲಯವಿದೆ. ನೆಲಮಟ್ಟದಿಂದ ಕೆಳಭಾಗಕ್ಕೆ 18 ಅಡಿ ಕೆಳಭಾಗದಲ್ಲಿ ಇರುವ ಈ ದೇವಾಲಯದಲ್ಲಿ ಪಾತಾಳೇಶ್ವರ ಶಿವಲಿಂಗವನ್ನು ಪೂಜಿಸಲಾಗುತ್ತದೆ. ಪಾತಾಳದಲ್ಲಿರುವುದರಿಂದ ಪಾತಾಳೇಶ್ವರ ಎಂಬ ಅಭಿದಾನ, ಗರ್ಭಗುಡಿ ಮತ್ತು ಮದ್ಯರಂಗ ಎರಡೇ ಈ ದೇವಾಲಯದ ಭಾಗಗಳು ಗರ್ಭ ಗುಡಿಯಲ್ಲಿನ ಮದ್ಯಭಾಗದಲ್ಲಿ ಪಾತಾಳೇಶ್ವರ, ಎಡಕ್ಕೆ ಪಾರ್ವತಿ ದೇವಿ ಇದ್ದು ಮುಂಭಾಗದಲ್ಲಿ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ.

ಉಮಾಮಹೇಶ್ವರ ದೇವಸ್ಥಾನ: ರಂಗಯ್ಯನ ಬಾಗಿಲಿನಿಂದ ಕರುವಿನಕಟ್ಟೆಗೆ ಹೋಗುವ ರಸ್ತೆಯಲ್ಲಿ ಈ ದೇವಾಲಯವಿದೆ. ಪಾಳೆಯಗಾರರ ಕಾಲದ ನಿರ್ಮಾಣ ಇದಾಗಿದೆ.

ಬೀರಗಲ್ಲೇಶ್ವರ ದೇವಾಲಯ: ದೊಡ್ಡಪೇಟೆ ಮುಖ್ಯರಸ್ತೆಯ ಜೈನ ಮಂದಿರದಿಂದ ಮೇಲ್ಭಾಗಕ್ಕೆ ಹೋಗುವ ಕಂಬಳಿ ಬೀದಿ ರಸ್ತೆಯಲ್ಲಿ ಈ ದೇವಾಲಯವಿದೆ.

ಚಂದ್ರಮೌಳೇಶ್ವರ ದೇವಾಲಯ : ಜೋಗಿಮಟ್ಟಿ ರಸ್ತೆಯ  ಶೃಂಗೇರಿ ಮಠದ ಆವರಣದಲ್ಲಿ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯವಿದೆ.

ನೀಲಕಂಠೇಶ್ವರ ಸ್ವಾಮಿ ದೇವಾಲಯ:

17ನೇ ಶತಮಾನದಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕನ ಕಾಲದಲ್ಲಿ ಸ್ಥಾಪನೆಯಾದ ದೇವಾಲಯ ಇದಾಗಿದೆ. ನಗರದ ಪ್ರಮುಖ ದೇವಾಲಯವಾದ ಇಲ್ಲಿಂದ  ನಗರದ ಕಾರ್ಯಕ್ರಮಗಳು ಶುರುವಾಗುತ್ತದೆ.

ಕೋಟೆಯ ಸಂಪಿಗೆ ಸಿದ್ದೇಶ್ವರ ದೇವಾಲಯ:

1328 ರಲ್ಲಿ ಹೊಯ್ಸಳರ ಶೈಲಿಯಲ್ಲಿ ನಿರ್ಮಾಣ ಮಾಡಲಾದ ದೇವಾಲಯ ಇದಾಗಿದ್ದು, ಇದರಲ್ಲಿ ಸಂಪಿಗೆ (ಸಿದ್ದನಾಥ )ಸಿದ್ದೇಶ್ವರ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಗುಹೆಯಲ್ಲಿ ನಿರ್ಮಾಣಗೊಂಡ ಗುಹಾಲಯ ಇದಾಗಿದೆ. ಕೋಟೆಯ ವಿಶಾಲವಾದ ಹಾಗೂ ದೊಡ್ಡ ಪ್ರಾಂಗಣ ಹೊಂದಿರುವ ದೇವಾಲಯ ಇದಾಗಿದೆ.

ಕೋಟೆಯ ಹಿಡಿಂಬೇಶ್ವರ ದೇವಾಲಯ:

ಕಲ್ಯಾಣ ಚಾಲುಕ್ಯ ಶೈಲಿಯಲ್ಲಿ 10-11ನೇ ಶತಮಾನದಲ್ಲಿ ನಿರ್ಮಾಣ ಮಾಡಲಾದ ದೇವಾಲಯ ಇದಾಗಿದೆ. ಶಾಸನದಲ್ಲಿ ಈ ದೇವರನ್ನು ಹಿಡುಂಬನಾಥ,ಇಡುಬಯ್ಯ ಹಿಡುಬಯ್ಯ ಎನ್ನಲಾಗಿದೆ. ಕಣಶಿಲೆಯ ಏಕಶಿಲಾ ಬಂಡೆಗಲ್ಲಿನ ಬೆಟ್ಟವನ್ನು ದೇವಾಲಯವನ್ನಾಗಿ ಕಟ್ಟಲಾಗಿದೆ.ಬೃಹತ್ ಗುಹೆಯನ್ನು ಗುಹಾಲಯವನ್ನಾಗಿ ಮಾಡಿ ಅದರಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.

ಕೋಟೆಯ ಪಶ್ಚಿಮ ಭಾಗದಲ್ಲಿರುವ ಫಲ್ಗುಣೇಶ್ವರ ದೇವಾಲಯ:

ಒನಕೆ ಕಿಂಡಿಯ ಉತ್ತರಕ್ಕೆ ಇರುವ ಈ ದೇವಾಲಯವು ಹೊಯ್ಸಳ ಶೈಲಿಯಲ್ಲಿ 1259 ರಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರಾಚೀನ ಗುಹಾಲಯವಾದ ಈ ದೇವಾಲಯವು ಹಲವು ಹಂತಗಳಲ್ಲಿ ನಿರ್ಮಾಣ ಮಾಡಲಾಗಿದೆ.

ಕೋಟೆಯ ಕಾಶಿ ವಿಶ್ವನಾಥ ದೇವಾಲಯ:

ಕೋಟೆಯ ಅಕ್ಕ ತಂಗಿ ಹೊಂಡದ ಕೆಳಭಾಗದಲ್ಲಿ ಇರುವ ಈ ದೇವಾಲಯವನ್ನು ಪಾಳೆಯಗಾರ ಶೈಲಿಯಲ್ಲಿ 17-18 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.

ಕೋಟೆಯ ತುಂಗಭದ್ರೇಶ್ವರ ದೇವಾಲಯ:

ಕೋಟೆಯ ತಂಗಿ ಹೊಂಡದ ಭಾಗದಲ್ಲಿ ಇರುವ ಈ ದೇವಾಲಯವನ್ನು ಪಾಳೆಯಗಾರ ಶೈಲಿಯಲ್ಲಿ 17-18 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.

ಕೋಟೆಯ ನಾಗಲಿಂಗೇಶ್ವರ  ದೇವಾಲಯ:

ಕೋಟೆಯ ಅಕ್ಕ ತಂಗಿ ಹೊಂಡದ ದಕ್ಷಿಣ ಭಾಗದಲ್ಲಿ ಇರುವ ಈ ದೇವಾಲಯವನ್ನು ಪಾಳೆಯಗಾರ ಶೈಲಿಯಲ್ಲಿ 17-18 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಬಂಡೆಗಲ್ಲಿನ ಮೇಲ್ಭಾಗದಲ್ಲಿ ಇದನ್ನು ನಿರ್ಮಿಸಲಾಗಿದೆ.

ಕೋಟೆಯ ಕರುವರ್ತೀಶ್ವರ ದೇವಾಲಯ:

ಕೋಟೆಯ ದಕ್ಷಿಣ ಭಾಗಕ್ಕೆ ಸಾಗುವ ರಸ್ತೆಯು ನೇರವಾಗಿ ಈ ದೇವಾಲಯಕ್ಕೆ ತಲುಪುತ್ತದೆ. ಇದರ ಮುಂಭಾಗದಲ್ಲಿ ಕೊಳವಿದ್ದು, ದೇವಾಲಯವು ಕಪ್ಪು ಕಲ್ಲಿನ ಸೂಕ್ಷ್ಮ ಕೆತ್ತನೆಗಳಿಂದ  ನಿರ್ಮಾಣ ಮಾಡಲಾಗಿದೆ.

ಚಿತ್ರದುರ್ಗದ ತಿಮ್ಮಣ್ಣನಾಯಕನ ಕೆರೆ ಪರಿಸರದಲ್ಲಿ ಇರುವ ಬಾಳೆಕಾಯಿ ಸಿದ್ದಪ್ಪನ ದೇವಾಲಯ:

ರಸಾಸಿದ್ದರಿಂದ ಸ್ಥಾಪಿತವಾದ ಶಿವಲಿಂಗ ಇದಾಗಿದೆ ಎನ್ನಲಾಗುತ್ತದೆ. 13-14 ನೇ ಶತಮಾನದ ಹೊಯ್ಸಳರ ಶೈಲಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಬೃಹತ್ ಬಂಡೆಗಲ್ಲಿನ ಕೆಳಗೆ ಇರುವ ಗುಹಾಲಯ ಇದಾಗಿದೆ.

ಕೋಟೆಯ ಕೆಂಚೇಶ್ವರ ದೇವಾಲಯ:

ಕೋಟೆಯ ಪೂರ್ವ ಭಾಗದಲ್ಲಿ ಮುಕ್ತಿಧಾಮದ ಬಳಿಯಲ್ಲಿ ಇರುವ ಕೆಂಚೇಶ್ವರ ದೇವಾಲಯವು  ಪಾಳೆಯಗಾರ ಶೈಲಿಯಲ್ಲಿ 17-18 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದರ ಬಳಿಯಲ್ಲಿ ಮತ್ತೊಂದು ಈಶ್ವರ ದೇವಾಲಯವನ್ನು ಇದೇ ಸಮಯ ಹಾಗೂ ಶೈಲಿಯಲ್ಲಿ ನಿರ್ಮಾಣ ಮಾಡಲಾದ ದೇವಾಲಯವನ್ನು ಕಾಣಬಹುದು.

ಚಿತ್ರದುರ್ಗದ ಚೋಳಘಟ್ಟದ ಉಮಾಮಹೇಶ್ವರ ದೇವಾಲಯ:  ಚಿತ್ರದುರ್ಗದ ಕವಾಡಿಗರಹಟ್ಟಿ ಗ್ರಾಮದಲ್ಲಿ ಇರುವ ಈ ದೇವಾಲಯವು 1187 ರಲ್ಲಿ ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಅತಿ ಪ್ರಾಚೀನ ಮಂದಿರವಾಗಿದೆ.

ಚಿತ್ರದುರ್ಗದ ಗಾರೆಹಟ್ಟಿಯ ಚೋಳೇಶ್ವರ ದೇವಾಲಯ:

ಚಿತ್ರದುರ್ಗದ ರೈಲ್ವೆ ನಿಲ್ದಾಣದ ಬಳಿಯಲ್ಲಿ ಇರುವ ಗಾರೆಹಟ್ಟಿ ಗ್ರಾಮದ ಚೋಳೇಶ್ವರ ದೇವಾಲಯವು 1124 ರಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು ನಗರದ ಅತ್ಯಂತ ಮತ್ತೊಂದು ಪ್ರಾಚೀನ ಮಂದಿರವಾಗಿದೆ.

ಚಿತ್ರದುರ್ಗದ ಕವಾಡಿಗರಹಟ್ಟಿ ಗ್ರಾಮದ ಗಂಗಾಧರೇಶ್ವರ ದೇವಾಲಯ: ಚಿತ್ರದುರ್ಗದ ಕವಾಡಿಗರಹಟ್ಟಿ ಗ್ರಾಮದಲ್ಲಿ ಇರುವ ಈ ದೇವಾಲಯವು ಪಾಳೆಯಗಾರ ಶೈಲಿಯಲ್ಲಿ 17-18 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ಶಿವರಾತ್ರಿ ಹಬ್ಬದಲ್ಲಿ ಇಲ್ಲಿ ಜಾಗರಣೆ, ವಿಶೇಷ ಪೂಜೆ,ಅಡ್ಡಪಲ್ಲಕ್ಕಿ ಉತ್ಸವ ನಡೆಸಲಾಗುತ್ತದೆ.

ಚಿತ್ರದುರ್ಗದ ಗಾರೆಹಟ್ಟಿ ಬಳಿಯ ಮಹಾಬಲೇಶ್ವರ ದೇವಾಲಯ:

17-18 ನೇ ಶತಮಾನಕ್ಕೆ ಸೇರಿದ ಪಾಳೆಯಗಾರ ಶೈಲಿಯಲ್ಲಿ ನಿರ್ಮಾಣ ಮಾಡಲಾದ ದೇವಾಲಯ ಇದಾಗಿದೆ. ಇದು ಬೃಹನ್ಮಠ ಕಾಲೇಜು ಆವರಣದಲ್ಲಿದೆ.

ಚಿತ್ರದುರ್ಗ ತಾಲ್ಲೂಕು ಮೆದಕೇರಿಪುರ (ಚಳ್ಳಕೆರೆ ರಸ್ತೆಯ ಮದಕರಿಪುರ) ಹಳೆಯ ಗ್ರಾಮ ನಿವೇಶನದ ಕಲ್ಲೇಶ್ವರ ದೇವಾಲಯ:

ಚಿತ್ರದುರ್ಗದ ನೂತನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಳಿಯಲ್ಲಿ ಇರುವ ಈ ದೇವಾಲಯವನ್ನು ಕಲ್ಯಾಣ ಚಾಲುಕ್ಯ ಶೈಲಿಯಲ್ಲಿ  12ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸ್ಥಳವನ್ನು ಹಿಂದೆ ಬೆಣ್ಣೆದೊಣೆಯನೂರು ಎಂದು ಕರೆಯಲಾಗುತ್ತಿತ್ತು. ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದ ಈ ದೇವಾಲಯವನ್ನು ಇತ್ತೀಚಿಗೆ ಜೀರ್ಣೋದ್ಧಾರ ಮಾಡಲಾಗಿದೆ.

ಚಿತ್ರದುರ್ಗದ ಪಶ್ಚಿಮ ಭಾಗದ ಚೋಳುಗುಡ್ಡದ ಕೆಳ ಭಾಗದಲ್ಲಿರುವ ಈಶ್ವರನಕಲ್ಲು:

ನಗರದ ಪಶ್ಚಿಮ ಭಾಗದ ಚೋಳುಗುಡ್ಡದ ಬುಡದಲ್ಲಿ ಇರುವ ಈಶ್ವರನ ಕಲ್ಲು ದೇವಾಲಯವು ಇಲ್ಲಿನ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ.

ಚಂದ್ರವಳ್ಳಿಯ ಪಂಚಲಿಂಗೇಶ್ವರ ದೇವಾಲಯ:

ಹಿಂದೆ ಇದನ್ನು ಸೂಳ್ಗಲ್ಲು ಎಂದು ಹೇಳಲಾಗುತ್ತಿತ್ತು. ಇದೀಗ ಹುಲೇಗೊಂದಿ ಕಂದಾಯ ಗ್ರಾಮ ವ್ಯಾಪ್ತಿಯಲ್ಲಿರುವ ಚಂದ್ರವಳ್ಳಿ ಪ್ರದೇಶದ ಅಂಕಲಿಮಠದ ಎದುರು ಇರುವ ಈ ದೇವಾಲಯವು ಪಂಚಲಿಂಗೇಶ್ವರ ಸ್ವಾಮಿ ಎಂದು ಹೇಳಲಾಗುತ್ತದೆ.

12-13 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.ಬೃಹತ್ ಬಂಡೆಯ ಕೆಳಭಾಗದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಐದು ಲಿಂಗಗಳಿದ್ದು ಪ್ರಮುಖವಾಗಿ ಧರ್ಮೇಶ್ವರ ಲಿಂಗವನ್ನು  ಪೂಜಿಸಲಾಗುತ್ತದೆ.

1286ರಲ್ಲಿ ಹೊಯ್ಸಳರ ಮಹಾ ಪ್ರಧಾನನಾದ ಪೆರುಮಾಳೆ ದಣ್ಣಾಯಕನು  ಈ ದೇವಾಲಯದ ಪೂಜಾ ಕಾರ್ಯಗಳಿಗೆ ಏಸಗೂರು (ಇಂದಿನ ಚಳ್ಳಕೆರೆ ರಸ್ತೆಯ ದಂಡಿನಕುರುಬರಹಟ್ಟಿ ಗ್ರಾಮದ ಹಳೆ ಗ್ರಾಮ ನಿವೇಶನ.) ಗ್ರಾಮವನ್ನು ದತ್ತಿ ನೀಡಿದ್ದಾನೆ. ಇದೇ ಪರಿಸರದಲ್ಲಿ ಹಿಂದೆ ಬಹಳಷ್ಟು  ಶಿವಾಲಯಗಳಿದ್ದು ಅದರಲ್ಲಿ ಬಹಳಷ್ಟು ದೇವಾಲಯಗಳು ಇಂದು ನಾಮಾವಶೇಷವಾಗಿವೆ.

ಚಂದ್ರವಳ್ಳಿಯ ಧವಳೇಶ್ವರ:

ಚಂದ್ರವಳ್ಳಿಯ ದಕ್ಷಿಣ ಭಾಗದಲ್ಲಿರುವ ಧವಳಪ್ಪನ ಗುಡ್ಡದ ಮೇಲೆ 12-13ನೇ ಶತಮಾನದ ಹೊಯ್ಸಳರ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಇದು ಚಿತ್ರದುರ್ಗದ ಪ್ರಾಚೀನ ಶೈವ ಕೇಂದ್ರವಾಗಿದೆ. ಗುಡ್ಡದ ಮೇಲಿರುವ ಪ್ರಾಚೀನ ಗುಹಾಲಯ ಇದಾಗಿದೆ. ಇದರ ಜೊತೆಗೆ ಇದೇ ಪರಿಸರದಲ್ಲಿ ಹತ್ತಾರು ಶಿವಲಿಂಗಗಳಿವೆ.

ಚಿತ್ರದುರ್ಗದ ಕೋಟೆಯ ಮೇಲೆ ಇರುವ ನೆಲ್ಲಿಕಾಯಿ ಸಿದ್ದಪ್ಪನ ಗುಡಿ.

ಚಿತ್ರದುರ್ಗ ಕೋಟೆಯಲ್ಲಿ ಅತ್ಯಂತ ಹೆಚ್ಚು ಎತ್ತರದ ಗಿರಿ ಶಿಖರವಾದ ನೆಲ್ಲಿಕಾಯಿ ಸಿದ್ದಪ್ಪನ ಬೆಟ್ಟದ ತುದಿಯಲ್ಲಿ ಇರುವ ನೆಲ್ಲಿಕಾಯಿ ಸಿದ್ದಪ್ಪನ ಗುಡಿಯು 17ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಗರ್ಭಗುಡಿಯಲ್ಲಿ ನೆಲ್ಲಿಕಾಯಿ ಗಾತ್ರದ ಪುಟ್ಟ ಶಿವಲಿಂಗ ಇರುವ ಕಾರಣಕ್ಕೆ ಈ ದೇವರಿಗೆ ನೆಲ್ಲಿಕಾಯಿ ಸಿದ್ದಪ್ಪ ಹೆಸರು ಬಂದಿದೆ. ಇದರ ಬಳಿಯಲ್ಲಿಯೇ ಅತ್ಯಂತ ಎತ್ತರದಲ್ಲಿ ನಿರ್ಮಾಣ ಮಾಡಲಾದ ಭತೇರಿ ಇದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೀಟರ್ ಬಳಸದೆಯೇ‌ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿರುವಂತೆ ಮಾಡಬಹುದು..!

ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಅತ್ಯಧಿಕವಾಗಿ ಸುರಿದ ಪರಿಣಾಮ ಈ ಬಾರಿ ಚಳಿಯೂ ಜಾಸ್ತಿ ಇರಲಿದೆ. ಕಳೆದ ವರ್ಷಕ್ಕಿಂತ ಅತ್ಯಧಿಕವಾಗಿರಲಿದೆ. ಈಗಾಗಲೇ ಚಳಿಗಾಲ ಶುರುವಾಗಿದೆ ಕೂಡ. ಚಳಿಗಾಲದಲ್ಲಿ ಮನೆಯೆಲ್ಲಾ ತಂಪಾಗಿರುತ್ತದೆ. ಕೆಲವೊಬ್ಬರಿಗೆ

ಹರ್ನಿಯಾ ಎಂದರೇನು ? ಸಮಸ್ಯೆಗಳು, ಲಕ್ಷಣಗಳು ಮತ್ತು ಪರಿಹಾರ : ಇಲ್ಲಿದೆ ಸಂಪೂರ್ಣ ಮಾಹಿತಿ…!

ಸುದ್ದಿಒನ್ | ಹರ್ನಿಯಾ ಎನ್ನುವುದು ಹೊಟ್ಟೆಯ ಅಥವಾ ಕಿಬ್ಬೊಟ್ಟೆಯ ಭಾಗದಲ್ಲಿ ಕಂಡುಬರುವ ವೈದ್ಯಕೀಯ ಸ್ಥಿತಿಯಾಗಿದ್ದು, ಹೊಟ್ಟೆಯ ಭಾಗದ ಅಂಗಗಳು ಸ್ನಾಯು ಅಥವಾ ಅಂಗಾಂಗಗಳ ನಡುವೆ ತೂರಿಕೊಂಡು ಚರ್ಮದ ಕೆಳ ಭಾಗದಲ್ಲಿ ಬಲೂನಿನಂತೆ ಊದಿಕೊಂಡು ಅಥವಾ

ಈ ರಾಶಿಯವರು ಶತ್ರುಗಳ ಒಳಸಂಚುಗಳಿಗೆ ಪ್ರತ್ಯುತ್ತರ ನೀಡಿ

ಈ ರಾಶಿಯವರು ಶತ್ರುಗಳ ಒಳಸಂಚುಗಳಿಗೆ ಪ್ರತ್ಯುತ್ತರ ನೀಡಿ, ಈ ರಾಶಿಯವರ ಪರಸ್ತ್ರೀ-ಪುರುಷ ಸಹವಾಸದಿಂದ ಕುಟುಂಬದಲ್ಲಿ ಕಲಹ, ಭಾನುವಾರ- ರಾಶಿ ಭವಿಷ್ಯ ನವೆಂಬರ್-24,2024 ಸೂರ್ಯೋದಯ: 06:30, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

error: Content is protected !!