ವಿಶೇಷ ಲೇಖನ : ಕೆ.ಎಂ.ಶಿವಸ್ವಾಮಿ
ಹಿರಿಯ ಪತ್ರಕರ್ತರು, ನಾಯಕನ ಹಟ್ಟಿ,
ಚಳ್ಳಕೆರೆ ತಾ. ಚಿತ್ರದುರ್ಗ ಜಿ.
ಮೊ : 94495 10078, 83105 40731
ಬಯಲುಸೀಮೆ ಚಿತ್ರದುರ್ಗ ಜಿಲ್ಲೆ ಬರವನ್ನೇ ಹೊದ್ದು ಮಲಗಿರುವ ಪ್ರದೇಶ. ಇಲ್ಲಿ ನೀರಾವರಿ, ಕೈಗಾರಿಕೆಗಳು ಕನಸಿನ ಮಾತು. ಈ ಕಾರಣಕ್ಕೆ ರಟ್ಟೆಯಲ್ಲಿ ಶಕ್ತಿಯಿದ್ದರೂ ದುಡಿಯಲು ಕೆಲಸಕ್ಕಾಗಿ ಇಲ್ಲಿನ ಯುವಕರು ದೂರದೂರುಗಳಿಗೆ ಗುಳೆ ಹೋಗುವುದು ಅನಿವಾರ್ಯವಾಗಿದೆ. ಇದಕ್ಕೆ ಕಡಿವಾಣ ಹಾಕಲು ಜಿಲ್ಲೆಯ ಜನರ ಒತ್ತಾಸೆಗೆ ಸರ್ಕಾರಗಳು ಸ್ಪಂದಿಸಿದ್ದು ವಿರಳ.
ಆದರೆ, ಕೇಳದೆ ಬಂದ ಭಾಗ್ಯವೆಂಬಂತೆ ಜಿಲ್ಲೆಗೆ ವಿಜ್ಞಾನ ಸಂಸ್ಥೆಗಳು ಕಾಲಿಟ್ಟಿವೆ. ಈ ಮೂಲಕ ಜಿಲ್ಲೆಯಲ್ಲಿ ನೇರ ರೈಲು ಮಾರ್ಗ, ವಾಯು ಸಾರಿಗೆ, ನೀರಾವರಿ, ಶಿಕ್ಷಣ ಕ್ಷೇತ್ರ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ವಿಶ್ವವಿಖ್ಯಾತ ವಿಜ್ಞಾನ ಸಂಸ್ಥೆಗಳು ಮಧ್ಯಕರ್ನಾಟಕದ ಜನರ ಭವಿಷ್ಯದ ಬದುಕಿಗೆ ಬೆಳಕಾಗಿ ಕಾಣುತ್ತಿವೆ ಎನ್ನಬಹುದು.
ಇತಿಹಾಸ ಕಾಲದಿಂದಲೂ ಕೋಟೆನಾಡು ಎಂದು ಪ್ರಖ್ಯಾತಗೊಂಡಿರುವ ಚಿತ್ರದುರ್ಗ ಜಿಲ್ಲೆ ಇದೀಗ ದೇಶದ ಅತಿಶ್ರೇಷ್ಠ ವೈಜ್ಞಾನಿಕ ಸಂಸ್ಥೆಗಳ ನೆಲೆಯಾಗುತ್ತಿದೆ. ವಿಶ್ವವಿಖ್ಯಾತಿ ಗಳಿಸಿರುವ ಹೆಸರಾಂತ ವಿಜ್ಞಾನ ಸಂಸ್ಥೆಗಳು ಜಿಲ್ಲೆಯಲ್ಲಿ ನೆಲೆಯೂರಿವೆ.
ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ 40 ಕಿ.ಮೀ. ದೂರದಲ್ಲಿರುವ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಸಮೀಪದ 12 ಸಾವಿರ ಎಕರೆ ಬೃಹತ್ ಪ್ರದೇಶದಲ್ಲಿ ದೇಶದ ಪ್ರಖ್ಯಾತ ವೈಜ್ಞಾನಿಕ ಸಂಸ್ಥೆಗಳು ನೆಲೆಗೊಳ್ಳುತ್ತಿವೆ. ನಾಯಕನಹಟ್ಟಿ ಹಾಗೂ ದೊಡ್ಡ ಉಳ್ಳಾರ್ತಿ ಪ್ರದೇಶಗಳಲ್ಲಿ ವೈಜ್ಞಾನಿಕ ಸಂಸ್ಥೆಗಳು ಕಾರ್ಯಾರಂಭ ಮಾಡಿವೆ. ಹೀಗಾಗಿ ಕೋಟೆ ಕೊತ್ತಲಗಳ ನಗರ ಎಂದು ಕರೆಯಿಸಿಕೊಳ್ಳಲಾಗುವ ಜಿಲ್ಲೆ ಮುಂದಿನ ದಿನಗಳಲ್ಲಿ ವೈಜ್ಞಾನಿಕ ಸಂಸ್ಥೆಗಳ ನಾಡು ಎಂದು ಹೊರಹೊಮ್ಮಲಿದೆ.
ಹನ್ನೆರಡು ಸಾವಿರ ಎಕರೆ ಪ್ರದೇಶದಲ್ಲಿ ಕೇಂದ್ರ ಸರಕಾರದ ಅಧೀನದಲ್ಲಿರುವ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ಬಾಬಾ ಅಣುಶಕ್ತಿ ಕೇಂದ್ರ (ಬಿಎಆರ್ಸಿ), ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ), ಕರ್ನಾಟಕ ಸಣ್ಣ ಕೈಗಾರಿಕೆ ಅಭಿವೃದ್ಧಿ ಸಂಸ್ಥೆ (ಕೆಐಡಿಬಿ) ಸೇರಿದಂತೆ ಪ್ರಖ್ಯಾತ ಸಂಸ್ಥೆಗಳು ಇಲ್ಲಿನ ಪ್ರದೇಶದಲ್ಲಿ ಸ್ಥಾಪನೆಗೊಳ್ಳುತ್ತಿವೆ.
ಈಗಾಗಲೇ ಎಲ್ಲ ಸಂಸ್ಥೆಗಳು ತಮ್ಮ ಕಾರ್ಯವನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಿವೆ. ಮುಂದಿನ ದಶಕದಲ್ಲಿ ಜಿಲ್ಲೆಯ ಚಿತ್ರಣ ಸಂಪೂರ್ಣ ಬದಲಾಗಲಿದೆ. ಕೇವಲ ಐತಿಹಾಸಿಕವಾಗಿ ಗುರುತಿಸಿಕೊಂಡಿದ್ದ ಜಿಲ್ಲೆಗೆ ರಾಷ್ಟ್ರ ಹಾಗೂ ವಿಶ್ವಮಟ್ಟದಲ್ಲಿ ಖ್ಯಾತಿ ದೊರೆಯಲಿದೆ.
ಏಷ್ಯಾಖಂಡದಲ್ಲಿ ವಿಜ್ಞಾನ ಸಂಸ್ಥೆಗಳಿಗಾಗಿ ಇಷ್ಟೊಂದು ಪ್ರದೇಶವನ್ನು ಮೀಸಲಾಗಿರಿಸಿರುವುದು ಇಲ್ಲಿ ಮಾತ್ರ. ಹೀಗಾಗಿ ಇಲ್ಲಿನ ಪ್ರದೇಶ ಪ್ರಪಂಚ ಭೂಪಟದಲ್ಲಿ ಪ್ರಮುಖ ಸ್ಥಾನ ಪಡೆಯಲಿದೆ.
ಯಾವ ವಿಜ್ಞಾನ ಸಂಸ್ಥೆಗೆ ಎಷ್ಟು ಭೂಮಿ ?
ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಒ) 4290 ಎಕರೆ,
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) 1500 ಎಕರೆ, ಬಾಬಾ ಅಣುಶಕ್ತಿ ಕೇಂದ್ರ (ಬಿಎಆರ್ಸಿ) 1810 ಎಕರೆ, ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) 573 ಎಕರೆ,
ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ (ಕೆಎಸ್ಸೆಸ್ಸೆಐಡಿಸಿ) 300 ಎಕರೆ,
ಸಾಜಿಟೌರ್ಸ್ ಪ್ರೈವೇಟ್ ಲಿಮಿಟೆಡ್ (ಸೌರಶಕ್ತಿ ಉತ್ಪಾದನೆ) 1250 ಎಕರೆ ಪ್ರದೇಶವನ್ನು ಈಗಾಗಲೇ ಕಂದಾಯ ಇಲಾಖೆ ಮೂಲಕ ಈ ಎಲ್ಲ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ. ಇದರ ಜತೆ ಭಾರತೀಯ ಸೇನೆಗೆ ಒಂದು ಸಾವಿರ ಎಕರೆ, ಭದ್ರಾ ಯೋಜನೆಯ ಅರಣ್ಯೀಕರಣಕ್ಕಾಗಿ 500 ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ): ಸಂಶೋಧನೆಯ ರಂಗದಲ್ಲಿ ಐಐಎಸ್ಸಿ ದೇಶದಲ್ಲಿನ ಮಂಚೂಣೆಯಲ್ಲಿರುವ ಸಂಸ್ಥೆಯಾಗಿದೆ. ನೂರು ವರ್ಷಗಳ ಇತಿಹಾಸವಿರುವ ಸಂಸ್ಥೆಗೆ ಬೆಂಗಳೂರು ಕೇಂದ್ರ ಕಚೇರಿಯಾಗಿದೆ. ಕುದಾಪುರದಲ್ಲಿರುವ ಐಐಎಸ್ಸಿ ಕೇಂದ್ರ ಎರಡನೇ ಕ್ಯಾಂಪಸ್ ಆಗಿದೆ. ಬೆಂಗಳೂರಿನಲ್ಲಿರುವ ಸಂಸ್ಥೆಯು 500 ಎಕರೆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಕುದಾಪುರ ಐಐಎಸ್ಸಿ ಕ್ಯಾಂಪಸ್ 1500 ಎಕರೆ ವಿಶಾಲ ಪ್ರದೇಶದಲ್ಲಿ ತಲೆಯತ್ತಿದೆ. ಹತ್ತು ಕೋಟಿ ರೂ. ವೆಚ್ಚದಲ್ಲಿ ಸಂಸ್ಥೆಯ 1500 ಎಕರೆ ಪ್ರದೇಶಕ್ಕೆ ಹತ್ತು ಕಿ.ಮೀ. ಉದ್ದದ ಕಾಂಪೌಂಡ್ ಹಾಗೂ ರಸ್ತೆಗಳನ್ನು ನಿರ್ಮಿಸಲಾಗಿದೆ. ಐಐಎಸ್ಸಿ ಆವರಣದಲ್ಲಿ ಹೆಚ್.ಎ.ಎಲ್ ಸಹಾಯದಿಂದ 65 ಕೋಟಿ ರೂ. ವೆಚ್ಚದಲ್ಲಿ ಪ್ರತಿಭಾ ವಿಕಾಸ ಕೇಂದ್ರವನ್ನು ನಿರ್ಮಿಸಿದೆ.
ಇದು ದೇಶದಲ್ಲಿಯೇ ಅತ್ಯುತ್ತಮ ವಾಸ್ತುಶಿಲ್ಪವನ್ನು ಹೊಂದಿರುವ ಐಕಾನಿಕ್ ಕಟ್ಟಡವಾಗಿದೆ. ಕಳೆದ ಐದು ವರ್ಷಗಳಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
ಐಐಎಸ್ಸಿ ಈಗಾಗಲೇ ರಾಜ್ಯದ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ಬೋಧನಾ ಮಟ್ಟ ಉತ್ತಮಪಡಿಸಲು ಪ್ರಯತ್ನಗಳನ್ನು ಆರಂಭಿಸಿದೆ. ಮೊದಲ ಹಂತದಲ್ಲಿ ರಾಜ್ಯದಲ್ಲಿರುವ ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳು ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಮತ್ತು ಗಣಿತ ಉಪನ್ಯಾಸಕರುಗಳಿಗೆ ಪ್ರಯೋಗಾಧಾರಿತ ತರಬೇತಿ ಕಾರ್ಯಕ್ರಮ ರೂಪಿಸಿ, ಜಾರಿಗೊಳಿಸಿದೆ. ದೇಶದ ನವೋದಯ, ಪದವಿ, ಇಂಜಿನಿಯರಿಂಗ್ ಸೇರಿದಂತೆ ಹಲವಾರು ಶಿಕ್ಷಕರು, ಉಪನ್ಯಾಸಕರಿಗೆ ಸನಿವಾಸ ತರಬೇತಿಯನ್ನು ನೀಡಲಾಗುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ ಈ ತರಬೇತಿ ದೇಶದ ಎಲ್ಲ ವಿಜ್ಞಾನ ಮತ್ತು ಗಣಿತ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುವ ಗುರಿಯನ್ನು ಹೊಂದಲಾಗಿದೆ.
ವೈಜ್ಞಾನಿಕ ಸಂಸ್ಥೆಗಳು ಹಾಗೂ ಅಭಿವೃದ್ಧಿ: ವೈಜ್ಞಾನಿಕ ಸಂಸ್ಥೆಗಳು ಇಲ್ಲಿ ತಳವೂರಿದ ನಂತರ ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಈ ಸಂಸ್ಥೆಗಳಿಗೆ ಕುಡಿಯುವ ನೀರು ನೀಡುವುದರ ಜತೆಗೆ ಚಳ್ಳಕೆರೆ ಹಾಗೂ ಹಿರಿಯೂರು ನಗರಗಳಿಗೆ ಕುಡಿಯುವ ನೀರು ದೊರೆತಿದೆ. ಇದೇ ಕಾರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ 150 ಎ ಆರು ಪಥಗಳ ದಾರಿಯಾಗಿ ಪರಿವರ್ತನೆಯಾಗಿದೆ. ಮುಂದಿನ ದಿನಗಳಲ್ಲಿ ನೇರ ರೈಲು, ಕೇಂದ್ರ ಪಠ್ಯಕ್ರಮದ ಶಾಲೆ, ಆಧುನಿಕ ಆಸ್ಪತ್ರೆ ಸೇರಿದಂತೆ ಮೂಲ ಸೌಲಭ್ಯಗಳು ಹೆಚ್ಚಳವಾಗುವ ನಿರೀಕ್ಷೆಯಿದೆ. ಜನರಿಗೆ ಉದ್ಯೋಗ ಹಾಗೂ ಮೂಲ ಸೌಲಭ್ಯಗಳು ಹೆಚ್ಚಳಕ್ಕೆ ವೈಜ್ಞಾನಿಕ ಸಂಸ್ಥೆಗಳು ಕಾರಣವಾಗಲಿವೆ ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ.
ವಿದ್ಯುತ್ ಕೊರತೆಗೂ ಪರಿಹಾರ :
ಬೆಂಗಳೂರು ಮೂಲಕ ಸಾಜಿಟೌರ್ ಇಂಡಿಯ ಕಂಪನಿಗೆ 1500 ಎಕರೆ ಭೂಮಿಯನ್ನು ದೀರ್ಘಕಾಲೀನ ಗುತ್ತಿಗೆ ಆಧಾರದಲ್ಲಿ ಜಮೀನು ನೀಡಲಾಗಿದೆ. ಇಲ್ಲಿನ 25 ಮೆಗಾವಾಟ್ ವಿದ್ಯುತ್ ತಯಾರಿಕೆಯ ಗುರಿಯನ್ನು ಹೊಂದಲಾಗಿದೆ. ಪ್ರದೇಶದಲ್ಲಿ ದೊರೆಯುವ ಹೆಚ್ಚಿನ ಪ್ರಮಾಣದ ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಿ, ವಿದ್ಯುತ್ ಇಲಾಖೆ ನೀಡಲಾಗುವುದು. ರಾಜ್ಯದ ವಿದ್ಯುತ್ ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರ ಸಾಧ್ಯವಾಗಲಿದೆ. ಪಾರ್ಕನಲ್ಲಿ ಕೇವಲ ವಿದ್ಯುತ್ ಉತ್ಪಾದನೆಗೆ ಮಾತ್ರ ಸೀಮಿತವಾಗಿಲ್ಲ. ಜತೆಗೆ ಸೌರ ಶಕ್ತಿಯಿಂದ ಹೆಚ್ಚು ಸಾಮಥ್ಯವಿರುವ ಹಾಗೂ ಅತ್ಯಂತ ಹೆಚ್ಚಿನ ಶಕ್ತಿಯನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದಿಸುವ ಸಂಶೋಧನೆಗಳನ್ನು ಕೈಗೊಳ್ಳಲಾಗುವುದು.
ದೇಶದ ಪ್ರಗತಿಗೆ ಬಳಕೆ ಆಗಲಿದೆ ಅಣುಶಕ್ತಿ :
ಹೆಚ್ಚುತ್ತಿರುವ ಇಂಧನದ ಬೇಡಿಕೆ, ಕಡಿಮೆಯಾಗುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳಿಂದಾಗಿ ನಾನಾ ಇಂಧನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಅಣುಶಕ್ತಿ ದೇಶದ ಭವಿಷ್ಯದ ಪ್ರಮುಖ ಮೂಲವನ್ನಾಗಿಸಲು ಬಾಬಾ ಅಣುಶಕ್ತಿ ಸಂಸ್ಥೆ (ಬಿಎಆರ್ಸಿ) ಶ್ರಮಿಸಲಿದೆ. ಅಣುಶಕ್ತಿಯನ್ನು ಶಾಂತಿಯುತ ಉದ್ದೇಶಗಳಿಗೆ ಬಳಸುವ ಗುರಿ ಹಾಗೂ ಉದ್ದೇಶವನ್ನು ಹೊಂದಲಾಗಿದೆ. ಯುರೇನಿಯಂ ಅನ್ನು ಬೇರ್ಪಡಿಸುವ ಕಾರ್ಯ ಇಲ್ಲಿನ ಪ್ರದೇಶದಲ್ಲಿ ಜರುಗಲಿದೆ. 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಅಣುಶಕ್ತಿ ಸಂಶೋಧನೆ ಹಾಗೂ ಅಭಿವೃದ್ಧಿಗೆ ಹಣ ಮೀಸಲಿರಿಸಲಾಗಿದೆ. ಇದನ್ನು ಬಳಸಿಕೊಂಡು ಕೃಷಿ, ಇಂಧನ, ಸೇರಿದಂತೆ ನಾನಾ ರಂಗಗಳಲ್ಲಿ ಅಣುಶಕ್ತಿ ಬಳಕೆಯ ಬಗ್ಗೆ ಸಂಶೋಧನೆಗಳನ್ನು ಇಲ್ಲಿ ಕೈಗೊಳ್ಳಲಾಗುವುದು. ಮೈಸೂರಿನಲ್ಲಿ ಬಿಎಆರ್ಸಿಯ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಇದರ ಅಂಗ ಸಂಸ್ಥೆಯಾಗಿ ಇಲ್ಲಿನ ಘಟಕ ಸಂಶೋಧನಾ ಕಾರ್ಯವನ್ನು ಕೈಗೊಳ್ಳಲಿದೆ.
ದುರ್ಗದಲ್ಲಿ ಭೂಕಂಪ ಪತ್ತೆಹಚ್ಚುವ ಕೇಂದ್ರ ಆರಂಭ :
ಐಐಎಸ್ಸಿ ಆವರಣದಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ಎರಡು ಕೆರೆಗಳನ್ನು ನಿರ್ಮಿಸಲಾಗಿದೆ. ಡಿಆರ್ಡಿಒ ಕೂಡ ತನ್ನ ಆವರಣದಲ್ಲಿ ಕೆರೆಗಳನ್ನು ನಿರ್ಮಿಸಿದೆ. ಹೀಗಾಗಿ ದಟ್ಟವಾದ ಕುರುಚಲು ಕಾಡು ತಲೆಯೆತ್ತಿದೆ. ಈಗಾಗಲೇ ಮೂರು ಕೋಟಿ ರೂ. ವೆಚ್ಚದ ಹವಾಮಾನ ಅಧ್ಯಯನ ಪ್ರಯೋಗಾಲಯ (ಕ್ಲೈಮ್ಯಾಟ್ ಲ್ಯಾಬ್) ಆರಂಭಗೊಂಡಿದೆ. ಭೂಕಂಪನ ಪತ್ತೆ ಹಚ್ಚುವ ಕೇಂದ್ರ (ಸಿಸ್ಮಿಕ್ ಸ್ಟೇಷನ್) ಆರಂಭವಾಗಿದೆ.
ಚಾಲಕ ರಹಿತ ಯುದ್ಧ ವಿಮಾನಗಳ ತಯಾರಿಕೆ :
ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ): ದೇಶ ರಕ್ಷಣೆಯಲ್ಲಿ ಡಿಆರ್ಡಿಒ ಪ್ರಮುಖ ಪಾತ್ರ ವಹಿಸುತ್ತಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಹೊಸ ತಂತ್ರಜ್ಞಾನದ ಶೋಧನೆಯಲ್ಲಿ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ಇದಕ್ಕಾಗಿ ಪ್ರತಿ ವರ್ಷ ಅಪಾರ ಪ್ರಮಾಣದ ಹಣ ಖರ್ಚು ಮಾಡಲಾಗುತ್ತಿದೆ. ಮುಂದಿನ ಯುದ್ಧಗಳು ವಿಮಾನ ಹಾಗೂ ಚಾಲಕ ರಹಿತ ವಿಮಾನಗಳ ಮೂಲಕ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಯಾವುದೇ ಪ್ರಾಣ ಹಾನಿಯಾಗದೇ ಯುದ್ಧದಲ್ಲಿ ಪಾಲ್ಗೊಳ್ಳುವ ಉದ್ದೇಶವನ್ನು ಡಿಆರ್‌ಡಿಒ ಹೊಂದಿದೆ. ಇದಕ್ಕಾಗಿ ಚಾಲಕ ರಹಿತ ವಿಮಾನಗಳನ್ನು ಸಂಸ್ಥೆ ವಿನ್ಯಾಸಗೊಳಿಸುತ್ತಿದೆ. ಇದರ ಸಾಮರ್ಥ್ಯ, ಗುರಿ ಪರೀಕ್ಷೆ, ನಿಖರತೆ ಸೇರಿದಂತೆ ನಾನಾ ಅಭ್ಯಾಸಗಳನ್ನು ಇಲ್ಲಿನ ಪ್ರದೇಶಗಳಲ್ಲಿ ಕೈಗೊಳ್ಳಲಾಗುತ್ತದೆ. 4.5 ಕಿ.ಮೀ. ಉದ್ದದ ರನ್ ವೇ ನಿರ್ಮಾಣಗೊಳ್ಳುತ್ತಿರುವುದು ಇಲ್ಲಿನ ವಿಶೇಷ. ಇದರಿಂದಾಗಿ ಜಿಲ್ಲೆಯ ಪ್ರಥಮ ವಿಮಾನ ನಿಲ್ದಾಣ ಇದಾಗಿದೆ. ಬೃಹತ್ ವಿಮಾನಗಳು ಸೇರಿದಂತೆ ರಾತ್ರಿ ಸಮಯದಲ್ಲಿಯೂ ಸಹ ವಿಮಾನ ನಿಲ್ದಾಣ ಕಾರ್ಯಾಚರಣೆ ನಡೆಸುತ್ತಿದೆ. ಕೇವಲ ಮಿಲಿಟರಿ ಉದ್ದೇಶಗಳಿಗಾಗಿ ಮೀಸಲಾಗಿರುವ ರನ್ ವೇ ಒಂದು ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಸೇವೆಗೆ ಸಿದ್ಧವಾಗಿದೆ. ಇಲ್ಲಿನ ಪ್ರದೇಶದಲ್ಲಿ ರುಸ್ತುಂ 1 ಹಾಗೂ ರುಸ್ತುಂ 2 ಪ್ರಾಯೋಗಿಕ ಹಾರಾಟಗಳು ಹಲವಾರು ಯಶಸ್ಸುಗಳನ್ನು ಕಂಡಿವೆ.
ಕೆ.ಎಂ.ಶಿವಸ್ವಾಮಿ ನಾಯಕನಹಟ್ಟಿ, ಹಿರಿಯ ಪತ್ರಕರ್ತರು