ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶಿವಸ್ವಾಮಿ ನಾಯಕನಹಟ್ಟಿ ಅಧಿಕಾರ ಸ್ವೀಕಾರ

1 Min Read

ಚಿತ್ರದುರ್ಗ, (ನವೆಂಬರ್.29) : ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆ.ಎಂ.ಶಿವಸ್ವಾಮಿ ನಾಯಕನಹಟ್ಟಿ ಸೋಮವಾರ ಅಧಿಕಾರ ಸ್ವೀಕಾರ ಮಾಡಿದರು.

ನಗರದ ಬಿ.ಡಿ.ರಸ್ತೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ನಡೆದ ಸಮಾರಂಭದಲ್ಲಿ ಆಡಳಿತಾಧಿಕಾರಿ ಬಿ.ಧನಂಜಯ ಅವರು ಅಧಿಕಾರ ಹಸ್ತಾಂತರಿಸಿದರು.

ಕಸಾಪ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಕೆ.ಎಂ.ಶಿವಸ್ವಾಮಿ ನಾಯಕನಹಟ್ಟಿ, ನಿರೀಕ್ಷೆಗೂ ಮೀರಿದ ಗೆಲವುನ್ನು ಜಿಲ್ಲೆಯ ಮತದಾರರು ನೀಡಿದ್ದು, ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಕನ್ನಡ ಮನಸ್ಸುಗಳು ನನಗೆ ಮಾರ್ಗದರ್ಶನ, ಸಲಹೆ ನೀಡಬೇಕು. ನಿಮ್ಮೆಲ್ಲರ ಸಹಕಾರ, ಪ್ರೀತಿ, ವಿಶ್ವಾಸದೊಂದಿಗೆ ಮುನ್ನೆಡೆಯುತ್ತೇನೆ. ಐದು ವರ್ಷಗಳಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಅಗತ್ಯವಾದ ಕೆಲಸಗಳನ್ನು ಮಾಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿಗೆ ಸದಸ್ಯರಾಗಲು ರೂ.500/- ಸದಸ್ಯತ್ವ ಶುಲ್ಕ ನಿಗಧಿಪಡಿಸಲಾಗಿದ್ದು, ಈ ಸದಸ್ಯತ್ವ ಶುಲ್ಕವನ್ನು ಮುಂದಿನ ದಿನಗಳಲ್ಲಿ ರೂ.250/-ಕ್ಕೆ ಇಳಿಕೆ ಮಾಡುವುದು ನಮ್ಮ ಮುಂದಿನ ಗುರಿಯಾಗಿದೆ. ರಾಜ್ಯದಲ್ಲಿ 6 ಕೋಟಿ ಕನ್ನಡಿಗರಿದ್ದರೂ ಕೇವಲ 3ಲಕ್ಷದ 40 ಸಾವಿರ ಸದಸ್ಯರಿದ್ದಾರೆ. ಹಾಗಾಗಿ ಕಸಾಪ ಸದಸ್ಯರ ಸಂಖ್ಯೆ ಹೆಚ್ಚಳಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.

ಕೆಲವು ಹಿಂದುಳಿದ ಪ್ರದೇಶಗಳು, ಗಡಿನಾಡು ಪ್ರದೇಶಗಳಲ್ಲಿ ಕನ್ನಡ ಸಾಹಿತ್ಯ ಕೆಲಸಗಳು ಆಗಬೇಕು. ಕನ್ನಡ ಭಾಷೆಯ ಕಾರ್ಯಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ನಡೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ದೊಡ್ಡಮಲ್ಲಯ್ಯ, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ರಾಮಲಿಂಗಶೆಟ್ರು, ಡಯಟ್ ಉಪನ್ಯಾಸಕ ನಾಗರಾಜ್, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ರಾಜಪ್ಪ, ರೇವಣ್ಣ, ಕೆಂಚಪ್ಪ, ನಾಗರಾಜ ಸಂಗಂ, ಮಹಡಿಶಿವಮೂರ್ತಿ, ಜಾದೂ ಮೋಹನ್, ಮಾರುತಿ ನಾಯಕನಹಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕರಾದ ದೊಡ್ಡಯ್ಯ ಸ್ವಾಗತಿಸಿದರು. ಮುಖ್ಯ ಶಿಕ್ಷಕರಾದ ರಂಗನಾಯ್ಕ್ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *