ಹೊಳಲ್ಕೆರೆ, (ಮೇ 09) : ಭ್ರಷ್ಟ ಹಾಗೂ ಜನವಿರೋಧ ವ್ಯಕ್ತಿಗಳ ಪರವಾಗಿ ವಿಧಾನಸಭಾ ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ಬರುವುದರಿಂದ ವಾಲ್ಮೀಕಿ, ಲಿಂಗಾಯತ ಹಾಗೂ ಹಿಂದುಳಿದ ಸಮುದಾಯ ಹಾಗೂ ಅಭಿಮಾನಿಗಳಿಗೆ ನೋವುಂಟಾಗಲಿದೆ ಎಂಬ ನಮ್ಮ ಮನವಿಗೆ ಸ್ಪಂದಿಸಿದ ನಟ ಕಿಚ್ಚ ಸುದೀಪ್ ಅವರ ನಡೆ ಹೆಚ್ಚು ಸಂತಸ ತಂದಿದೆ ಎಂದು ವಾಲ್ಮೀಕಿ ಸಮಾಜದ ಜಿಲ್ಲಾ ಉಪಾಧ್ಯಕ್ಷ ಲಿಂಗವ್ವನಾಗ್ತಿಹಳ್ಳಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಈ ಸಂಬಂಧ ಮಂಗಳವಾರ ಹೇಳಿಕೆ ನೀಡಿರುವ ಅವರು, ಯಾವುದೇ ನಟರು ತಮಗೆ ಇಷ್ಟವಾದ ಪಕ್ಷ, ವ್ಯಕ್ತಿ ಪರವಾಗಿ ಪ್ರಚಾರ ನಡೆಸಲು ಸ್ವತಂತ್ರರು. ಆದರೆ, ಸಮುದಾಯದ ಜನವಿರೋಧಿ ವ್ಯಕ್ತಿಗಳ ಪರ ಪ್ರಚಾರ ನಡೆಸುವುದರಿಂದ ಅಭಿಮಾನಿ ಹಾಗೂ ಸಮಾಜಕ್ಕೆ ನೋವು ಆಗಲಿದೆ ಎಂಬುದು ನಮ್ಮ ಅಭಿಪ್ರಾಯವಾಗಿತ್ತು. ಇದಕ್ಕೆ ಸ್ಪಂದಿಸಿರುವುದು ನಮ್ಮಲ್ಲಿ ಅವರ ಕುರಿತು ಹೆಚ್ಚು ಗೌರವ ಭಾವನೆ ಮೂಡಿಸಿದೆ ಎಂದಿದ್ದಾರೆ.
ಹೊಳಲ್ಕೆರೆ ತಾಲೂಕು ಜನರು ಬಹಳಷ್ಟು ನಟರ ಅಭಿಮಾನಿಗಳು. ಡಾ.ರಾಜ್‍ಕುಮಾರ್ ಅವರ ಮನೆಗೆ ಪ್ರತಿ ವರ್ಷ ಹಲಸಿನ ಹಣ್ಣು ಕಳುಹಿಸಿ ಪ್ರೀತಿ ತೋರುತ್ತಿದ್ದವರು ಭರಮಸಾಗರದ ವ್ಯಕ್ತಿ. ನಟರು ಎಂದರೆ ಇಲ್ಲಿನ ಜನರಿಗೆ ಪ್ರೀತಿ, ಅಭಿಮಾನ, ಗೌರವ ಇದೆ.
ಆದರಲ್ಲೂ ಹ್ಯಾಟ್ರೀಕ್ ಹಿರೋ ಶಿವರಾಜ್‍ಕುಮಾರ್, ಸುದೀಪ್, ದರ್ಶನ್ ಈ ಮೂವರು ನಟರನ್ನು ಒಂದೇ ವೇದಿಕೆಯಲ್ಲಿ ನೋಡುವಾಸೆ ಅಭಿಮಾನಿಗಳಲ್ಲಿ ಬಹಳ ದಿವಸದಿಂದ ಇದೆ. ಆದ್ದರಿಂದ ಜಿಲ್ಲೆಯ ಮಠಾಧೀಶರ ಸಾನ್ನಿಧ್ಯ, ಮಾಜಿ ಸಚಿವ ಎಚ್.ಆಂಜನೇಯ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲಿ ಹೊಳಲ್ಕೆರೆ ಪಟ್ಟಣ ಅಥವಾ ಭರಮಸಾಗರದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಲಾಗಿದೆ.
ಈ ಸಂಬಂಧ ಶೀಘ್ರದಲ್ಲಿಯೇ ಸಭೆ ಕರೆದು ಚರ್ಚೆ ಬಳಿಕ ಬೆಂಗಳೂರಿಗೆ ತೆರಳಿ ಅವರ ದಿನಾಂಕ ಪಡೆದು ಕಾರ್ಯಕ್ರಮ ನಿಗದಿ ಮಾಡಲಾಗುವುದು ಎಂದು ನಾಗಪ್ಪ, ಬೈಯಣ್ಣ, ಎಂ.ಪಿ.ಮಧುಪಾಲೇಗೌಡ, ಎಂ.ಪ್ರಕಾಶ್, ತಿಪ್ಪೇಶ್‍ಗೌಡ, ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.