ರೈತರ ಬದುಕಿಗೆ ಶಿಮುಲ್ ಸಹಕಾರಿ : ಸಚಿವ ಡಿ ಸುಧಾಕರ್

2 Min Read

ಸುದ್ದಿಒನ್, ಹಿರಿಯೂರು, ಜೂನ್. 22 : ನಂದಿನಿ ಹಾಲು ಮತ್ತು ಉತ್ಪನ್ನಗಳು ಯಾವುದೇ ಕಲಬೆರಕೆ ಇಲ್ಲದ ಮತ್ತು ಪರಿಶುದ್ಧವಾದ ಉತ್ಪನ್ನವಾಗಿದ್ದು, ಹಾಲಿನ ಸೇವನೆಯು ಮನುಷ್ಯನ ಆರೋಗ್ಯಕ್ಕೆ ಉತ್ತಮ ವಾದ ಒಂದು ಆಹಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್
ತಿಳಿಸಿದರು.

ನಗರದ ಪ್ರಣವ್ ಬಡಾವಣೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ ನಂದಿನಿ ಪ್ರಾಂಚೈಸಿ ಪಾರ್ಲರ್ ಮಳಿಗೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ರೈತರಿಂದ ರೈತರಿಗಾಗಿ ಕಾರ್ಯನಿರ್ವಹಿಸುತ್ತಿರುವ ಶಿವಮೊಗ್ಗ , ದಾವಣಗೆರೆ ಹಾಗೂ ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹೈನುಗಾರಿಕೆ ಮೂಲಕ ಲಕ್ಷಾಂತರ ಜನರಿಗೆ ತಮ್ಮ ಬದುಕು ಕಟ್ಟಿಕೊಳ್ಳಲು ಸಹಕರಿಸುತ್ತಿದೆ. ಹಿರಿಯೂರು ಒಳಗೊಂಡಂತೆ ವಿವಿಧೆಡೆಗಳಲ್ಲಿ ಫ್ರಾಂಚೈಸಿಗಳನ್ನು ತೆರೆದು ನಂದಿನಿ ಉತ್ಪನ್ನಗಳು ಸಿಗುವಂತೆ ಮಾಡಲಾಗುತ್ತಿದೆ. ಶಿಮುಲ್ ಒಕ್ಕೂಟವು ರೈತರಿಂದ ರೈತರಿಗಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತಸ ತಂದಿದೆ.

ಶಿಮುಲ್ ನಿರ್ದೇಶಕ ಬಿಸಿ. ಸಂಜೀವಮೂರ್ತಿ ಮಾತನಾಡಿ ಶಿಮೂಲ್ ವ್ಯಾಪ್ತಿಯ ಚಿತ್ರದುರ್ಗ ವಿಭಾಗದಲ್ಲಿ 400 ಹಾಲು ಉತ್ಪಾದಕರ ಸಂಘಗಳ ಮೂಲಕ ಲೀಟರ್ ಹಾಲು ಉತ್ಪಾದಕರಿಂದ ಸುಮಾರು ಪ್ರತಿದಿನ 2.50 ಲಕ್ಷ ಲೀಟರ್ ಖರೀದಿ ಮಾಡಿದ ಹಾಲನ್ನ ಸಂಸ್ಕರಿಸಿ ಶುದ್ಧ ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು, ಮೊಸರು, ಬೆಣ್ಣೆ, ತುಪ್ಪ ಸೇರಿದಂತೆ ಸುಮಾರು 160ಕ್ಕೂ ಹೆಚ್ಚು ವಿವಿಧ ಬಗೆಗಳ ಉತ್ಪನ್ನಗಳನ್ನು ನೀಡಲಾಗುತ್ತಿದೆ. ನಾವು ನಿರ್ದೇಶಕರಾಗಿ ಆಡಳಿತ ಮಂಡಳಿಗೆ ಬಂದ ಮೇಲೆ ಕೇವಲ ಎಂಟು ತಿಂಗಳಲ್ಲಿ ನಮ್ಮ ಒಕ್ಕೂಟದಿಂದ 6 ಪಾರ್ಲರ್ ಗಳು, ಹತ್ತಕ್ಕೂ ಹೆಚ್ಚು ಪ್ರಾಂಚೈಸಿ ಪಾರ್ಲರ್ ಗಳು ಗ್ರಾಹಕರ ಅನುಕೂಲಕ್ಕಾಗಿ ಪ್ರಾರಂಭಿಸಲಾಗಿದೆ. ಚಳ್ಳಕೆರೆ, ಹಿರಿಯೂರು ನಗರ ಹಾಗೂ ಯಲ್ಲದಕೆರೆ ಗ್ರಾಮದಲ್ಲೂ ಕೂಡ ಪ್ರಾಂಚೈಸಿ ಪಾರ್ಲರ್ ಗಳನ್ನು ಉದ್ಘಾಟಿಸಲಾಯಿತು ಎಂದರು.

ನಂದಿನಿ ಉತ್ಪನ್ನಗಳು ಹೆಚ್ಚಿಗೆ ಮಾರಾಟವಾದಲ್ಲಿ, ನಾವು ರೈತರಿಂದ ಇನ್ನು ಹೆಚ್ಚು ಹೆಚ್ಚು ಹಾಲು ಖರೀದಿಸಲು ಸಾಧ್ಯವಾಗುತ್ತದೆ. ನಂದಿನಿ ಉತ್ಪನ್ನಗಳು ಕೇವಲ ಜಿಲ್ಲೆ, ತಾಲೂಕು, ರಾಜ್ಯವಲ್ಲದೆ ಅಂತರ್ ರಾಜ್ಯ ಮತ್ತು ವಿದೇಶಗಳಲ್ಲೂ ಸಹ ಉತ್ತಮವಾಗಿ ಮಾರಾಟವಾಗುತ್ತಿದೆ. ಇದರಿಂದ ಹೈನುಗಾರಿಕೆ ರೈತರಿಗೆ ಸಹಕರಿಯಾಗುತ್ತಿದೆ. ಈ ನಿಟ್ಟಿನಲ್ಲಿ, ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳು ಹಾಗೂ ಮುಖ್ಯವಾದ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 50 ನಂದಿನಿ ಮಳಿಗೆಗಳನ್ನ ತೆರೆಯಲು ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿಮುಲ್ ಮಾರುಕಟ್ಟೆ ವ್ಯವಸ್ಥಾಪಕರಾದ ಬಿಕೆ ಪ್ರಮೋದ್, ಜಿಲ್ಲಾ ಮಾರುಕಟ್ಟೆ ಉಸ್ತುವಾರಿ ಬಿಎಂ. ಹನುಮಂತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಈರಲಿಂಗೇಗೌಡ, ಜಿಪಂ ಮಾಜಿ ಸದಸ್ಯ ಆರ್ ನಾಗೇಂದ್ರ ನಾಯ್ಕ, ನಂದಿನಿ ಪಾರ್ಲರ್ ಮಾಲೀಕ ಕರವೇ ಅಧ್ಯಕ್ಷ ರಾಮಕೃಷ್ಣಪ್ಪ, ಮುಖಂಡ ಜಗದೀಶ್ ಕಂದಿಕೆರೆ, ಮಾಜಿ ನಗರಸಭಾ ಸದಸ್ಯ ರವಿಚಂದ್ರ ನಾಯಕ್, ದಾದಾ ಪೀರ್, ಗೋ. ಬಸವರಾಜ್, ಟಿ. ಚಂದ್ರಶೇಖರ್ ಸೇರಿದಂತೆ ಶಿಮುಲ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks