ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಪ್ಡೇಟ್ ಗಳು ನಡೆಯುತ್ತಿವೆ. ಹಲವರ ಬಂಧನವಾಗಿದೆ. ತನಿಖೆ ಚುರುಕುಗೊಳಿಸಲಾಗಿದೆ. ನಿನ್ನೆ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಬಂಧನವಾಗಿದೆ ಎನ್ನಲಾಗಿತ್ತು. ಆದರೆ ಬಂಧನವಾಗಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಶಾಂತಕುಮಾರ್ ಅವರ ಬಂಧನವಾಗಿಲ್ಲ. ಬದಲಿಗೆ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಸೂಕ್ತ ಸಾಕ್ಷ್ಯಗಳು ಸಿಕ್ಕಿದರೆ ಸಿಐಡಿ ಅಧಿಕಾರಿಗಳು ಅರೆಸ್ಟ್ ಮಾಡುತ್ತಾರೆ. ಪ್ರಕರಣ ಸಂಬಂಧ ಅರೆಸ್ಟ್ ಆಗಿದ್ದ ಸಿಬ್ಬಂದಿಗಳ ವಿಚಾರಣೆಯೂ ನಡೆಯುತ್ತಿದೆ.
ಪರೀಕ್ಷೆಯ ಪ್ರತಿಯೊಂದು ಸೆಂಟರ್ ನಲ್ಲೂ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿಯೇ ಅಲ್ಲಿ ಯಾರೆಲ್ಲಾ ಕೆಲಸ ಮಾಡಿದ್ರು, ಅವರನ್ನೆಲ್ಲಾ ಕರೆದು ವಿಚಾರಣೆ ಮಾಡಲಾಗುತ್ತಿದೆ. ಸಿಐಡಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ತಪ್ಪಿತಸ್ಥರು ಯಾರೇ ಇದ್ದರು ಬಿಡುವುದಿಲ್ಲ ಎಂದಿದ್ದಾರೆ. ಇನ್ನು ಶಾಂತಕುಮಾರ್ ಈ ಹಿಂದೆ ಪೊಲೀಸ್ ನೇಮಕಾತಿ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಕೆಲಸ ಮಾಡಿದ್ದರು. ಇತ್ತಿಚೆಗೆ ವರ್ಗಾವಣೆಯಾಗಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟೀಸ್ ನೀಡಿದೆ.