ಶಂಕರಾಭರಣಂ, ಸಾಗರ ಸಂಗಮಂ, ಸ್ವಾತಿ ಮುತ್ಯಂ ಮತ್ತು ಸ್ವರ್ಣ ಕಮಲಂ ಮುಂತಾದ ಅಪ್ರತಿಮ ಚಿತ್ರಗಳ ನಿರ್ದೇಶನದ ಮೂಲಕ ಜನಪ್ರಿಯರಾಗಿದ್ದ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ಐದು ಬಾರಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಕಾಸಿನಾಧುನಿ ವಿಶ್ವನಾಥ್ ಅವರು ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ವಯೋಸಹಜ ಕಾಯಿಲೆಗಳಿಂದ ಗುರುವಾರ ಮಧ್ಯ ರಾತ್ರಿ ಕೊನೆಯುಸಿರೆಳೆದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.
ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಮಧ್ಯರಾತ್ರಿಯ ಸುಮಾರಿಗೆ ಅವರು ಕೊನೆಯುಸಿರೆಳೆದರು. ಅವರ ಪಾರ್ಥಿವ ಶರೀರವನ್ನು ಜುಬಿಲಿ ಹಿಲ್ಸ್‌ನಲ್ಲಿರುವ ಅವರ ನಿವಾಸಕ್ಕೆ ಸ್ಥಳಾಂತರಿಸಲಾಯಿತು.
ಫೆಬ್ರವರಿ 19, 1930 ರಂದು ಗುಂಟೂರು ಜಿಲ್ಲೆಯಲ್ಲಿ ಜನಿಸಿದರು. ಅವರು ಅತ್ಯುತ್ತಮ ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರರಾಗಿದ್ದರು. ಅವರು ತೆಲುಗು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ 50 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ ಮತ್ತು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ಅವರಿಗೆ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಏಳು ನಂದಿ ಪ್ರಶಸ್ತಿಗಳು ಮತ್ತು 10 ಫಿಲ್ಮ್‌ಫೇರ್ ಪ್ರಶಸ್ತಿಗಳು ಬಂದಿವೆ. 1992 ರಲ್ಲಿ, ಅವರಿಗೆ ಆಂಧ್ರ ಪ್ರದೇಶ ಸರ್ಕಾರವು ರಘುಪತಿ ವೆಂಕಯ್ಯ ಪ್ರಶಸ್ತಿಯನ್ನು ನೀಡಿತು. ಮತ್ತು 2017 ರಲ್ಲಿ ಕೇಂದ್ರ ಸರ್ಕಾರವು ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿತು.
ಅವರ ನಿಧನದಿಂದ ಚಿತ್ರರಂಗದಲ್ಲಿ ಕತ್ತಲೆ ಕವಿದಿದೆ ಎಂದು ನಿಧನಕ್ಕೆ ತೆಲುಗು ಸೇರಿದಂತೆ ದೇಶದ ಇತರೆ ಭಾಷೆಯ ಚಿತ್ರರಂಗದಿಂದ ಸಂತಾಪ ವ್ಯಕ್ತವಾಗಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ಅವರು ಕೆ.ವಿಶ್ವನಾಥ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.