ಧಾರವಾಡ: ಹೆಣ್ಣು ಮಕ್ಕಳಿಗೆ ಯಾವಾಗಲೂ ಇದು ತುಂಬಾ ಮುಖ್ಯವಾಗುತ್ತೆ. ಯಾವುದೇ ಸಂದರ್ಭದಲ್ಲೂ ತಮ್ಮನ್ನು ತಾವು ರಕ್ಷಿಸಿಕೊಳ್ಳೋ ಧೈರ್ಯ ಅವರಲ್ಲಿರಬೇಕಾಗುತ್ತದೆ. ಪುಂಡರು, ರೇಗಿಸುವವರನ್ನ ಧೈರ್ಯದಿಂದ ಎದುರಿಸಲೇಬೇಕಾಗುತ್ತದೆ. ಹೀಗಾಗಿ ಧಾರವಾಡದಲ್ಲಿ ಬಿಸಿಎಂ ಹಾಸ್ಟೇಲ್ ನಲ್ಲಿ ಹೊಸ ತರಬೇತಿ ನೀಡಲು ಮುಂದಾಗಿದ್ದಾರೆ.
ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಈ ತರಬೇತಿ ಶುರು ಮಾಡಲು ತಯಾರಿ ನಡೆಸಲಾಗಿದೆ. ಸೆಲ್ಫ್ ಡಿಫೆನ್ಸ್ ತರಬೇತಿ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಇಂದು ನಡೆದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಧಾರವಾಡ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಹಿಂದುಳಿದ ವರ್ಗ ಹಾಗೂ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ ರಶ್ಮಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯರಿಗೆ ಸ್ವಯಂ ರಕ್ಷಣೆ ಅತ್ಯಗತ್ಯ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸೆಲ್ಫ್ ಡಿಫೆನ್ಸ್ ತುಂಬಾನೇ ಮುಖ್ಯವಾಗಿದೆ.
ವಸತಿ ನಿಲಯಗಳಿಗೆ ದಾಖಲಾಗುವ ವಿದ್ಯಾರ್ಥಿಗಳು ಹೆಮ್ಮೆ ಪಡುವಂತೆ ಮತ್ತು ಸಾರ್ವಜನಿಕರು ವಸತಿ ನಿಲಯಗಳ ಬಗ್ಗೆ ಅಭಿಮಾನ, ವಿಶ್ವಾಸ ವ್ಯಕ್ತಪಡಿಸುವಂತೆ ಮಾಡಬೇಕು. ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿಯೊಂದರಲ್ಲೂ ಪಾರದರ್ಶಕತೆ ಕಾಪಾಡಬೇಕೆಂದು ಸೂಚಿಸಿದರು. ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿದಿನ ಪಡಿತರ ಧಾನ್ಯ ತೆಗೆದುಕೊಳ್ಳಬೇಕು ಮತ್ತು ಆಹಾರ ಹಂಚಿಕೆ ಮಾಡಬೇಕು ಎಂದಿದ್ದಾರೆ.