ನವದೆಹಲಿ: ಇತ್ತಿಚೆಗೆ ದೇಶದ್ರೋಹ ಕೇಸ್ ಚರ್ಚೆಯಲ್ಲಿತ್ತು. ಐಪಿಸಿ ಸೆಕ್ಷನ್ 124ಎ ಅಡಿಯಲ್ಲಿ ಹಾಕುವ ದೇಶದ್ರೋಹ ಪ್ರಕರಣ ದುರ್ಬಳಕೆಯಾಗುತ್ತಿದೆ ಎಂದು ಕೋರ್ಟ್ ಗೆ ಹತ್ತಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅರ್ಜಿಯ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ಸದ್ಯಕ್ಕೆ ಕೇಸ್ ಹಾಕುವುದನ್ನು ತಡೆಹಿಡಿದಿದೆ. ಮುಂದಿನ ವಿಚಾರಣೆವರೆಗೆ ದೇಶದ್ರೋಹ ಕೇಸ್ ಹಾಕುವ ಆಗಿಲ್ಲ ಎಂದಿದೆ.
ಕೇಂದ್ರ ಸರ್ಕಾರ ಮರುಪರಿಶೀಲನೆ ಮಾಡಬೇಕು. ಮರುಪರಿಶೀಲನೆ ಮಾಡುವ ತನಕ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಯಾವುದೇ ದೇಶದ್ರೋಹದ ಪ್ರಕರಣ ದಾಖಲಿಸಬಾರದು ಎಂದು ಕೋರ್ಟ್ ಆದೇಶ ನೀಡಿದೆ. ದೇಶದ್ರೋಹ ಕಾನೂನು ದುರ್ಬಳಕೆಯಾಗುತ್ತಿದೆ ಎಂದು ಅರ್ಜಿದಾರರು ಅರ್ಜಿ ಸಲ್ಲಿಸಿದ್ದಾರೆ. ಹನುಮಾನ್ ಚಾಲೀಸಾ ಪಠಣದಲ್ಲಿ ದೇಶದ್ರೋಹದ ಸೆಕ್ಷನ್ ಗಳನ್ನು ವಿಧಿಸಲಾಗಿದೆ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾನೂನು ಬಗ್ಗೆ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದ್ದಾರೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ಆದೇಶ ನೀಡಿರುವ ಸುಪ್ರೀಂ ಕೋರ್ಟ್, ಪರಿಶೀಲನೆಯಾಗುವವರೆಗೂ ಯಾವುದೇ ಹೊಸ ಪ್ರಕರಣ ದಾಖಲಿಸುವಂತಿಲ್ಲ. ಒಂದು ವೇಳೆ ದಾಖಲಿಸಲೇಬೇಕಾದ ಅನಿವಾರ್ಯತೆ ಉಂಟಾದರೆ ಕೋರ್ಟ್ ಮೊರೆ ಹೋಗಿ ದಾಖಲಿಸಬಹುದು. ದೇಶದಲ್ಲಿ ನಾಗರಿಕರ ಹಕ್ಕುಗಳ ರಕ್ಷಣೆಯ ಅವಶ್ಯಕತೆ ಇದೆ ಎಂದಿದೆ ಕೋರ್ಟ್.