ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಹೊರ ಬಿದ್ದಿದೆ. ಈ ಬಾರಿ 5,46,698 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಇಷ್ಟು ಸಂಖ್ಯೆಯಲ್ಲಿ ಮಕ್ಕಳು ಪಾಸಾಗಿರೋದನ್ನ ಕಂಡು ಸ್ವತಃ ಶಿಕ್ಷಣ ಸಚಿವರೇ ಖುಷಿಯಾಗಿದ್ದಾರೆ. 6,32,200 ವಿದ್ಯಾರ್ಥಿಗಳು ಪರೀಕ್ಷೆಯನ್ನ ಬರೆದಿದ್ದರು. ಇನ್ನು ಪ್ರತಿಸಲದಂತೆ ಈ ಸಲವೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಈ ಪೈಕಿ 2,32,928 ಬಾಲಕರು ಪಾಸ್ ಆಗಿದ್ದರೆ, 3,13,770 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಹಾಗೇ ಕಲಾ ವಿಭಾಗದಲ್ಲಿ 98,310 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 2,66,071 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 1,82,317 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಈ ಬಾರಿ ಫಲಿತಾಂಶ ಪ್ರಕಟಣೆಯನ್ನು ವಿಭಿನ್ನವಾಗಿ ಮಾಡಿದ್ದಾರೆ. ಪ್ರತಿಸಲ ಕೂಡ ಬೆಳಗ್ಗೆ 11 ಗಂಟೆ ಸಮಯಕ್ಕೆ ಸುದ್ದಿಗೋಷ್ಠಿ ನಡೆಸಿ, ಮಕ್ಕಳ ಬಗ್ಗೆ ಸಚಿವರು ಮಾತನ್ನಾಡಿದ ಮೇಲೆ ಫಲಿತಾಂಶ ಪ್ರಕಟವಾಗ್ತಾ ಇತ್ತು. ಆದರೆ ಈ ಬಾರಿ ಮೊದಲು ಫಲಿತಾಂಶವನ್ನ ಪ್ರಕಟಣೆ ಮಾಡಿ, ಆ ನಂತರ ಸುದ್ದಿಗೋಷ್ಟಿ ನಡೆಸಿದ್ದಾರೆ.













