ಚಿತ್ರದುರ್ಗ,(ಮಾ.9): ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ವ್ಯವಸ್ಥಿತವಾಗಿ, ಯಾವುದೇ ಲೋಪದೋಷವಿಲ್ಲದಂತೆ ಸುಗಮವಾಗಿ ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಸಂತ ಜೋಸೆಫ್ ಕಾನ್ವೆಂಟ್ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಗಳಿಗೆ ಗುರುವಾರ ಭೇಟಿ ನೀಡಿ, ಪರೀಕ್ಷಾ ಕೇಂದ್ರಗಳಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿದ ಅವರು, ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೈಗೊಂಡ ಆಸನದ ವ್ಯವಸ್ಥೆ, ಕುಡಿಯುವ ನೀರು, ಬೆಳಕಿನ ವ್ಯವಸ್ಥೆಯ ಬಗ್ಗೆ ಖುದ್ದು ಪರಿಶೀಲಿಸಿದರು. ಅಲ್ಲದೆ ಪರೀಕ್ಷಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಶುಭ ಹಾರೈಸಿದರು.
ಮಾರ್ಚ್ 9 ರಿಂದ ಪರೀಕ್ಷೆಗಳು ಪ್ರಾರಂಭವಾಗಿದ್ದು, ಮಾರ್ಚ್ 29 ರವರೆಗೆ ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು, ಸಿಬ್ಬಂದಿ ಪರೀಕ್ಷೆಯಲ್ಲಿ ಯಾವುದೇ ಲೋಪದೋಷಗಳು ಸಂಭವಿಸಿದಂತೆ ಕಟ್ಟುನಿಟ್ಟಾಗಿ ಪರೀಕ್ಷಾ ಕಾರ್ಯ ನಿರ್ವಹಿಸುವಂತೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಗಳಲ್ಲಿ ಸೂಕ್ತವಾದ ಆಸನ, ಗಾಳಿ, ಬೆಳಕು, ಕುಡಿಯುವ ನೀರಿನ ವ್ಯವಸ್ಥೆ, ಪ್ರತಿ ಕೊಠಡಿಯಲ್ಲಿ ಗಡಿಯಾರದ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು ಎಂದರು.
ಪರೀಕ್ಷಾ ಕೇಂದ್ರಕ್ಕೆ ಯಾವುದೇ ರೀತಿಯ ಪೋನ್, ಸ್ಮಾರ್ಟ್ ಫೋನ್ ಹಾಗೂ ಎಲೆಕ್ಟ್ರಿಕಲ್ ವಸ್ತುಗಳನ್ನು ಕೊಂಡಯ್ಯಲು ಅವಕಾಶವಿಲ್ಲ. ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ ಮೇಲ್ವಿಚಾರಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಹ ಮೊಬೈಲ್ ಫೋನ್ ಬಳಸುವಂತಿಲ್ಲ. ಪರೀಕ್ಷಾ ಕೇಂದ್ರ ಮುಖ್ಯಸ್ಥರು ಬೇಸಿಕ್ ಸೆಟ್ ಮೊಬೈಲ್ ಪೋನ್ ಮಾತ್ರ ಪರೀಕ್ಷಾ ಕಾರ್ಯಗಳಿಗೆ ಸಂಬಂಧಿಸಿದಂತೆ ಬಳಸಬೇಕು. ಪರೀಕ್ಷಾ ಕೇಂದ್ರ ಪ್ರವೇಶಿಸುವ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಿ, ಪರೀಕ್ಷಾ ಕೇಂದ್ರದ ಒಳಗೆ ಬಿಡಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ರಾಜು ಸೇರಿದಂತೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಇದ್ದರು.