ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಮಾರ್ಚ್06) : ಮಾರ್ಚ್ 9 ರಿಂದ 29ರ ವರೆಗೆ ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ದ್ವೀತಿಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು 15660 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಯಾವುದೇ ಲೋಪದೋಷಗಳ ಸಂಭವಿಸದಂತೆ, ಕಟ್ಟುನಿಟ್ಟಾಗಿ ಪರೀಕ್ಷಾ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆ ಹಾಗೂ 6ನೇ ತರಗತಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ಸಿದ್ಧತೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ರೂಪಿಸಿರುವ ಪರೀಕ್ಷಾ ಮಾರ್ಗದರ್ಶಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಪರೀಕ್ಷಾ ಕಾರ್ಯ ನಿರ್ವಹಿಸುವಲ್ಲಿ ಬೇಜವಾಬ್ದಾರಿ ಹಾಗೂ ನಿರ್ಲಕ್ಷತೆ ಬೇಡ. ಪರೀಕ್ಷೆಗಳು ಸುಸೂತ್ರವಾಗಿ ನಡೆಯಬೇಕು. ನಿಯಮಗಳು ಸರಿಯಾದ ರೀತಿಯಲ್ಲಿ ಪಾಲನೆ ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ನೇರವಾಗಿ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಪರೀಕ್ಷಾ ಕೇಂದ್ರ ಮುಖ್ಯ ಅಧೀಕ್ಷಕರು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಮೂಲಭೂತ ಸೌರ್ಯಗಳ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿಯ ಪೋನ್, ಸ್ಮಾರ್ಟ್ ಫೋನ್ ಹಾಗೂ ಎಲೆಕ್ಟ್ರಿಕಲ್ ವಸ್ತುಗಳನ್ನು ಕೊಂಡಯ್ಯಲು ಅವಕಾಶವಿಲ್ಲ.
ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ ಮೇಲ್ವಿಚಾರಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಹ ಮೊಬೈಲ್ ಫೋನ್ ಬಳಸುವಂತಿಲ್ಲ. ಪರೀಕ್ಷಾ ಕೇಂದ್ರ ಮುಖ್ಯಸ್ಥರು ಮೊಬೈಲ್ ಪೋನ್ ಮಾತ್ರ ಪರೀಕ್ಷಾ ಕಾರ್ಯಗಳಿಗೆ ಸಂಬಂಧಿಸಿದಂತೆ ಬಳಸಬೇಕು. ಪರೀಕ್ಷಾ ಕೇಂದ್ರ ಒಳಗೆ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಿಸಲು ಅವಕಾಶವಿದೆ. ಪೋಷಕರಿಗೆ ಅವಕಾಶವಿಲ್ಲ. ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೂಕ್ತ ಆಸನದ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ಕೊಠಡಿಯಲ್ಲೂ ಗಡಿಯಾರ ಇರಬೇಕು ಎಂದರು.
ತಪಾಸಣೆ ಹಾಗೂ ಹಿಜಾಬ್ ನಿಷೇಧ : ಪರೀಕ್ಷಾ ಕೇಂದ್ರ ಪ್ರವೇಶಿಸುವ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಬೇಕು. ಇದಕ್ಕಾಗಿ ಪ್ರತ್ಯೇಕವಾಗಿ ಉಪನ್ಯಾಸಕರನ್ನು ನೇಮಿಸಿ, ತಪಾಸಣೆ ನಡೆಸುವ ಕ್ರಮದ ಬಗ್ಗೆ ಪೊಲೀಸರಿಂದ ಸೂಕ್ತ ತರಬೇತಿ ನೀಡಬೇಕು. ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ತಪಾಸಣಾ ಸ್ಥಳ ನಿರ್ಮಿಸಿಬೇಕು. ಸುಪ್ರಿಂ ಕೋರ್ಟ್ ಆದೇಶದಂತೆ ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ ಎಂದರು.
ಸಿ.ಸಿ.ಟಿ.ವಿ. ಕ್ಯಾಮರಾ ಕಣ್ಗಾವಲು: ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಕೊಂಡಯ್ಯಲು ತಹಶೀಲ್ದಾರ್, ಬಿ.ಇ.ಓ ಹಾಗೂ ಪ್ರಾಚಾರ್ಯರನ್ನು ಒಳಗೊಂಡ 7 ವಿಶೇಷ ಪ್ರಶ್ನೆ ಪತ್ರಿಕಾ ಪಾಲಕ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಪರೀಕ್ಷಾ ಕೇಂದ್ರ ಸಂಕೇತಗಳನ್ನು ಸರಿಯಾಗಿ ಪರಿಶೀಲಿಸಿ, ಜಿ.ಪಿ.ಎಸ್. ಅಳವಡಿಸಿದ ವಾಹನದಲ್ಲಿ ನಿಗಧಿಪಡಿಸಿದ ಮಾರ್ಗ ಹಾಗೂ ಸಮಯಾನುಸಾರ ಪೊಲೀಸ್ ರಕ್ಷಣೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಬೇಕು. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಸಿ.ಸಿ.ಟಿ.ವಿ ಕಣ್ಗಾವಲಿನಲ್ಲಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಪಡೆದು, ಖುದ್ದಾಗಿ ಸರಿಯಾದ ಸಮಯಕ್ಕೆ ಪರೀಕ್ಷಾ ಮೇಲ್ವಿಚಾರಕರಿಗೆ ಇವುಗಳನ್ನು ತಲುಪಿಸಬೇಕು.
ಮೇಲ್ವಿಚಾರಕರನ್ನು 5 ವಿದ್ಯಾರ್ಥಿಗಳಿಂದ ಸಹಿ ಪಡೆದು ಪ್ರಶ್ನೆ ಪತ್ರಿಕೆಯ ಬಂಡಲ್ ತೆರೆಯಬೇಕು. ಪರೀಕ್ಷಾ ಕೊಠಡಿ ಹಾಗೂ ಮುಖ್ಯ ಅಧೀಕ್ಷಕರ ಕೊಠಡಿಯಲ್ಲಿ ಕಡ್ಡಾಯವಾಗಿ ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಅಳವಡಿಸಬೇಕು. ಸಿ.ಸಿ.ಟಿ.ವಿ ಎದುರಿನಲ್ಲಿಯೇ ಉತ್ತರ ಪತ್ರಿಕೆಗಳ ಬಂಡಲ್ ಮಾಡಿ, ಪರೀಕ್ಷಾ ಕೇಂದ್ರ ಮುಖ್ಯ ಅಧಿಕ್ಷಕರೇ ಪೊಸ್ಟ್ ಮುಖಾಂತರ ಮೌಲ್ಯ ಮಾಪನ ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಪ್ರತಿದಿನ ಪರೀಕ್ಷೆ ಮುಗಿದ ನಂತರ ಆಯಾ ದಿನದ ಸಿ.ಸಿ.ಟಿ.ವಿ ದೃಶ್ಯಾವಳಿಗಳನ್ನು ಸಂಗ್ರಹಿಸಿಡಬೇಕು.
ಮಾಧ್ಯಮದವರಿಗೆ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶವಿಲ್ಲ. ಫೋಟೋ ಹಾಗೂ ವಿಡಿಯೋ ಚಿತ್ರಿಕರಣಕ್ಕೆ ಅವಕಾಶವಿಲ್ಲ. ಪರೀಕ್ಷಾ ಕೇಂದ್ರ ಹೊರಡಗೆ ಮಾಧ್ಯಮವರು ಫೋಟೋ ಹಾಗೂ ವಿಡಿಯೋ ಚಿತ್ರಿಕರಣಕ್ಕೆ ಮಾಡಿಕೊಳ್ಳಬಹುದು. ಪರೀಕ್ಷಾ ಕೇಂದ್ರಗಳ ಬಂದೋಬಸ್ತ್‍ಗೆ ಸೂಕ್ತ ಪೊಲೀಸ್ ಹಾಗೂ ಆರೋಗ್ಯ ಸಿಬ್ಬಂದಿಗಳನ್ನು ನೇಮಿಸಬೇಕು ಎಂದರು.
23 ಪರೀಕ್ಷಾ ಕೇಂದ್ರ 15660 ವಿದ್ಯಾರ್ಥಿಗಳು: ಈ ಬಾರಿ ಜಿಲ್ಲೆಯಲ್ಲಿ 15660 ವಿದ್ಯಾರ್ಥಿಗಳು ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆ ಬರೆಯಲಿದ್ದಾರೆ.
ಇದರಲ್ಲಿ 4807 ಕಲಾ, 4722 ವಿಜ್ಞಾನ, 3559 ವಾಣಿಜ್ಯ ವಿಭಾಗದ ಹೊಸ ವಿದ್ಯಾರ್ಥಿಗಳು ಸೇರಿದಂತೆ, 2126 ಪುನರಾವರ್ತಿತ ಹಾಗೂ 446 ಖಾಸಗಿ ವಿದ್ಯಾರ್ಥಿಗಳು ಇದ್ದಾರೆ.
ಚಿತ್ರದುರ್ಗ ತಾಲೂಕಿನಲ್ಲಿ 8, ಚಳ್ಳಕೆರೆ 3, ಹಿರಿಯೂರು 4, ಹೊಸದುರ್ಗ 4, ಮೊಳಕಾಲ್ಮೂರು 2 ಹಾಗೂ ಹೊಳಲ್ಕೆರೆ 2 ಸೇರಿದಂತೆ ಒಟ್ಟು 23 ಪರೀಕ್ಷಾ ಕೇಂದ್ರಗಳಿವೆ. ಇವುಗಳಿಗೆ 128 ಪಿ.ಯು. ಕಾಲೇಜುಗಳು ಸಂಯೋಜಿತವಾಗಿವೆ. ಬೆಂಗಳೂರಿನ ಕೇಂದ್ರ ಕಚೇರಿಯಿಂದಲೇ ಸಿಟಿಂಗ್ ಸ್ಕ್ವಾಡ್ ಹಾಗೂ ಫ್ಲೈಯಿಂಗ್ ಸ್ಕ್ವಾಡ್ ನೇಮಿಸಲಾಗುವುದು ಎಂದು ಪಿ.ಯು. ಉಪನಿರ್ದೇಶಕ ರಾಜು ಸಭೆಯಲ್ಲಿ ಮಾಹಿತಿ ನೀಡಿದರು.
ಮಾರ್ಚ್ 12 ರಂದು 6ನೇ ತರಗತಿ ವಸತಿ ಶಾಲಾ ಪ್ರವೇಶ ಪರೀಕ್ಷೆ: ಮಾರ್ಚ್ 12 ಭಾನುವಾರದಂದು 6ನೇ ತರಗತಿ ವಸತಿ ಶಾಲಾ ಪ್ರವೇಶ ಪರೀಕ್ಷೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 7705 ಮಕ್ಕಳು 18 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವರು.
ಪಿ.ಯು. ವಾರ್ಷಿಕ ಪರೀಕ್ಷೆಗಳು ಜರುಗುವ ಕೇಂದ್ರಗಳಲ್ಲಿ ವಸತಿ ಶಾಲಾ ಪ್ರವೇಶ ಪರೀಕ್ಷೆ ನಡೆಯಲಿದೆ. ತಹಶೀಲ್ದಾರ್, ಬಿ.ಇ.ಓ ಹಾಗೂ ಪ್ರಾಚಾರ್ಯರನ್ನು ಓಳಗೊಂಡ ವಿಶೇಷ ಪ್ರಶ್ನೆ ಪತ್ರಿಕಾ ಪಾಲಕ ತಂಡಗಳೇ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಹಾಗೂ ಓ.ಎಂ.ಆರ್. ಶೀಟ್‍ಗಳನ್ನು ಕೊಂಡಯ್ಯಬೇಕು. ಪ್ರತಿ ವಿದ್ಯಾರ್ಥಿ ಹೆಸರು ಹಾಗೂ ನೊಂದಣಿ ಸಂಖ್ಯೆ ಆಧಾರಿಸಿ ಪ್ರಶ್ನೆ ಪತ್ರಿಕೆ ಹಾಗೂ ಓ.ಎಂ.ಆರ್. ಪ್ರತಿಗಳು ಮುದ್ರಿತವಾಗಿ. ಆಯಾ ವಿದ್ಯಾರ್ಥಿಗಳಿಗೆ ಅವುಗಳನ್ನು ನೀಡಬೇಕು. ಪರೀಕ್ಷೆ ಮುಗಿದ ಓ.ಎಂ.ಆರ್. ಹಾಗೂ ಖಾಲಿ ಓ.ಎಂ.ಆರ್. ಪ್ರಶ್ನೆ ಪತ್ರಿಕೆಗಳನ್ನು ಪ್ರತ್ಯೇಕವಾಗಿ ಬಂಡಲ್ ಮಾಡಬೇಕು. ನಂತರ ಪ್ರಶ್ನೆ ಪತ್ರಿಕಾ ಪಾಲಕ ತಂಡಗಳೇ ಪೊಸ್ಟ್ ಮೂಲಕ ಇವುಗಳನ್ನು ಮೌಲ್ಯ ಮಾಪನ ಕೇಂದ್ರಕ್ಕೆ ತಲುಪಿಸಬೇಕು. ಚಿಕ್ಕ ಮಕ್ಕಳು ಪರೀಕ್ಷೆ ಬರೆಯುವುದರಿಂದ ಮಕ್ಕಳು ನೊಂದಣಿ ಸಂಖ್ಯೆಗಳ ಕೊಠಡಿ ತಲುಪಲು ಸಹಾಯ ಮಾಡಬೇಕು. ಪಿ.ಯು. ಪರೀಕ್ಷೆ ಮಾದರಿಯಲ್ಲಿಯೇ ಕಟ್ಟುನಿಟ್ಟಾಗಿ ಪರೀಕ್ಷೆ ಕಾರ್ಯ ನಡೆಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗನಾಥ್, ಡಿವೈಎಸ್ಪಿ ಅನಿಲ್ ಕುಮಾರ್, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಉಪನಿರ್ದೇಶಕ ರವಿಶಂಕರ್ ರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್, ಬಿ.ಇ.ಓ, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಇದ್ದರು.