ಚಿತ್ರದುರ್ಗ, (ಮೇ.31) : ಬೇಸಿಗೆ ರಜೆ ಕಳೆದಿದೆ. ಶಾಲೆಗಳು ಆರಂಭವಾಗಿದೆ.. ಮಕ್ಕಳು ರಜೆಯ ಮಜೆಯಿಂದ ಹೊರ ಬಂದು ಶಾಲೆಗೆ ಹೊರಡಲು ಸಿದ್ಧರಾಗಿದ್ದಾರೆ. ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಆರಂಭವಾಗಿದೆ. ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲು ಶಿಕ್ಷಕರು ಕೂಡ ಸಿದ್ಧರಾಗಿ ನಿಂತಿದ್ದಾರೆ.
ಮೊದಲ ದಿನ ಶಾಲೆ ಆರಂಭವಾದಾಗ ಮಕ್ಕಳನ್ನು ವಿಶೇಷವಾಗಿ ಬರಮಾಡಿಕೊಳ್ಳುತ್ತಾರೆ. ಇದು ಕೆಲವು ವರ್ಷಗಳಿಂದ ನಡೆದುಕೊಂಡ ಬಂದ ಸಂಪ್ರದಾಯವಾಗಿದೆ. ಈ ಬಾರಿಯೂ ಹಲವು ಜಿಲ್ಲೆಗಳಲ್ಲಿ ಶಾಲೆಗಳು ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ತಳಿರು ತೋರಣಗಳಿಂದ ಅಲಂಕಾರಗೊಂಡಿದೆ.
ಎಲ್ಲಾ ಶಾಲೆಗಳಿಗೂ ಶಿಕ್ಷಣ ಇಲಾಖೆ ಸೂಚನೆಯನ್ನು ನೀಡಿದೆ. ಮಕ್ಕಳನ್ನು ಖುಷಿ ಖುಷಿಯಾಗಿ ಬರಮಾಡಿಕೊಳ್ಳಲು ತಿಳಿಸಿದೆ. ಮೊದಲ ದಿನ ಬರುವ ಮಕ್ಕಳಿಗೆ ಸಿಹಿ ನೀಡಿ ಬರಮಾಡಿಕೊಳ್ಳುವಂತೆ ಸೂಚಿಸಿದೆ. ಮೊದಲ ದಿನವಾದ್ದರಿಂದ ಮಕ್ಕಳಿಗೆ ಆರಂಭದಲ್ಲಿ ಸ್ವಲ್ಪ ಸಮಯ ನೀಡಿ ಬಳಿಕ ತರಗತಿಗಳನ್ನು ಆರಂಭಿಸಬೇಕೆಂದು ಸೂಚನೆ ನೀಡಿದೆ.
ಮಳೆಗಾಲ ಬೇರೆ ಶುರುವಾಗಿರುವ ಕಾರಣ ಎಷ್ಟೋ ಶಾಲಾ ಕೊಠಡಿಗಳು ಇನ್ನು ದುರಾವಸ್ಥೆಯಲ್ಲಿಯೇ ಇದೆ. ಹೀಗಾಗಿ ಅವುಗಳ ಕಡೆಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದೆ. ಸ್ವಚ್ಛತೆ ಜೊತೆಗೆ ಎಚ್ಚರಿಕೆಯನ್ನು ವಹಿಸಿಕೊಂಡು ತರಗತಿ ಆರಂಭಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.