ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ. 13 : ಸಂಘಟನೆ ಕೊರತೆಯಿರುವುದರಿಂದ ಛಲವಾದಿ ಸಮಾಜವನ್ನು ಬಲಪಡಿಸುವ ಸಂಬಂಧ ಪ್ರವಾಸಿ ಮಂದಿರದಲ್ಲಿ ಭಾನುವಾರ ಛಲವಾದಿ ಮುಖಂಡರುಗಳ ಪೂರ್ವಭಾವಿ ಸಭೆ ನಡೆಯಿತು.
ಮಧ್ಯ ಕರ್ನಾಟಕದಲ್ಲಿ ಛಲವಾದಿ ಸಮಾಜದವರು ವೈಯಕ್ತಿಕ ಪ್ರತಿಷ್ಟೆಯನ್ನು ಬದಿಗಿರಿಸಿ ಜನಾಂಗದ ಹಿತದೃಷ್ಟಿಯಿಂದ ಒಂದಾಗಬೇಕಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ನಮ್ಮ ಜನಾಂಗ ಮುಂದೆ ಬರಬೇಕಾಗಿರುವುದರಿಂದ ಎಲ್ಲಾ ಬಣಗಳು ಒಂದಾಗಿ ಸೇರಿದಾಗ ಮಾತ್ರ ಶಕ್ತಿ ಮೂಡಿಸಿದಂತಾಗುತ್ತದೆ. ರಾಜ್ಯ ಮಟ್ಟದಲ್ಲಿ ಎರಡು ಮೂರು ಸಂಘಟನೆಗಳಾಗಿ ಛಲವಾದಿ ಜನಾಂಗ ಅಲ್ಲಲ್ಲಿ ಚದುರಿರುವುದನ್ನು ಸರಿಪಡಿಸಬೇಕಾಗಿದೆ ಎಂದು ಛಲವಾದಿ ಮಹಾಸಭಾ ಮಾಜಿ ರಾಜ್ಯಾಧ್ಯಕ್ಷ ಎಸ್.ಕೆ.ಬಸವರಾಜ್ ಸಭೆಯಲ್ಲಿ ಸೂಚಿಸಿದರು.
ದಾವಣಗೆರೆ ಛಲವಾದಿ ಸಮಾಜದ ಜಿಲ್ಲಾಧ್ಯಕ್ಷ ನಿವೃತ್ತ ಎಸ್ಪಿ ಎನ್.ರುದ್ರಮುನಿ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡುತ್ತ ರಾಜ್ಯಾದ್ಯಂತ ಹರಿದು ಹಂಚಿ ಹೋಗಿರುವ ಛಲವಾದಿ ಜನಾಂಗವನ್ನು ಒಂದು ವೇದಿಕೆಯಡಿ ಕರೆತಂದು ಸಂಘಟಿಸುವ ಅನಿವಾರ್ಯತೆಯಿದೆ. ಹಾಗಾಗಿ ತಮ್ಮ ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಎಲ್ಲರೂ ಒಂದುಗೂಡಬೇಕಿದೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲಾ ಛಲವಾದಿ ಸಮಾಜದ ಮುಖಂಡ ಹೆಚ್.ಸಿ.ನಿರಂಜನಮೂರ್ತಿ ಮಾತನಾಡಿ ಛಲವಾದಿ ಸಮಾಜದ ಚದುರುವುದು ಬೇಡ, ಹೋಳಾಗಿರುವ ಸಂಘಟನೆಗಳ ಜೊತೆ ಚರ್ಚಿಸಿ ಒಂದುಗೂಡಿಸುವ ಪ್ರಯತ್ನ ಮಾಡಬೇಕಿದೆ. ಆಗ ಮಾತ್ರ ಛಲವಾದಿ ಜನಾಂಗದ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಹೇಳಿದರು.
ಚನ್ನಗಿರಿ ನಾಗರಾಜ್, ಸೋಮಶೇಖರ್ ಹೊಸಮನೆ, ನ್ಯಾಯವಾದಿ ಹೆಚ್.ಅಣ್ಣಪ್ಪಸ್ವಾಮಿ, ಎಸ್.ಎನ್.ರವಿಕುಮಾರ್, ದಯಾನಂದ, ಭಾರ್ಗವಿ ದ್ರಾವಿಡ್, ಜಯರಾಂ, ಪಿಲ್ಲಾಳಿ ಪರಮೇಶ್ವರ್, ರಂಗಸ್ವಾಮಿ ಇನ್ನು ಅನೇಕರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.