ಜನವರಿ 8 ರಂದು ಚಿತ್ರದುರ್ಗದಲ್ಲಿ ಎಸ್ಸಿ/ಎಸ್ಟಿ ಸಮಾವೇಶ : ಡಾ.ಜಿ.ಪರಮೇಶ್ವರ್

3 Min Read

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ.ಸಂಖ್ಯೆ : 78998 64552

ಚಿತ್ರದುರ್ಗ, (ಡಿ.07): ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರನ್ನು ಒಂದು ವೇದಿಕೆಗೆ ತಂದು ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕಾಗಿ ಮುಂದಿನ ತಿಂಗಳು 8 ರಂದು ಚಿತ್ರದುರ್ಗದಲ್ಲಿ ಎಸ್ಸಿ/ಎಸ್ಟಿ ಸಮಾವೇಶ ನಡೆಸಲಾಗುವುದೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸಮಾವೇಶ ನಡೆಯಲಿರುವ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ನಾಯಕರುಗಳೊಂದಿಗೆ ಬುಧವಾರ ಸ್ಥಳ ವೀಕ್ಷಣೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಶೇ.24.1 ರಷ್ಠಿದೆ. ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸಿಕೊಂಡು ಬರುತ್ತಿದೆ.

ಕಾಂಗ್ರೆಸ್ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಎಸ್ಸಿ, ಎಸ್ಟಿ.ಗಳ ಯೋಗಕ್ಷೇಮ ಕಾಪಾಡಿಕೊಳ್ಳುವುದರ ಜೊತೆಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದರ ಫಲವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಪರಿಶಿಷ್ಠ ಜಾತಿಯಲ್ಲಿನ 101 ಹಾಗೂ ಪರಿಶಿಷ್ಠ ವರ್ಗದಲ್ಲಿನ 52 ಜಾತಿಗಳನ್ನು ಒಂದು ಕಡೆ ಸೇರಿಸುವುದು ಸಮಾವೇಶದ ಉದ್ದೇಶ ಎಂದು ಹೇಳಿದರು.

ಬಿಜೆಪಿ, ಜೆಡಿಎಸ್. ಇತ್ತೀಚೆಗೆ ಎಸ್ಸಿ, ಎಸ್ಟಿ.ಗಳ ಮೇಲೆ ಎಲ್ಲಿಲ್ಲದ ಆಸಕ್ತಿ ತೋರುತ್ತಿದೆ. ದಲಿತರ ಮನೆಗಳಲ್ಲಿ ವಾಸ್ತವ್ಯ ಮಾಡುವ ಇವರುಗಳು ಹೋಟೆಲ್‍ನಿಂದ ತಂದು ಊಟ ಮಾಡುವುದು ಸರಿಯಾ ಎಂದು ಪ್ರಶ್ನಿಸಿದ ಡಾ.ಜಿ.ಪರಮೇಶ್ವರ್ ಬಿಜೆಪಿ.ಯವರು ಅಂಬೇಡ್ಕರ್ ಫೋಟೋವನ್ನು ಮರೆತಿದ್ದು, ಇತ್ತೀಚೆಗೆ ಇಡುತ್ತಿದ್ದಾರೆ.

ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಬಜೆಟ್‍ನಲ್ಲಿ ಶೇ.24.1 ರಷ್ಟು ಜನಸಂಖ್ಯೆಯಿರುವ ಎಸ್ಸಿ.ಎಸ್ಟಿ.ಗಳಿಗೆ ಹಣ ಮೀಸಲಿಟ್ಟು ಎಸ್.ಸಿ.ಪಿ. ಟಿ.ಎಸ್.ಪಿ.ಕಾಯಿದೆ ಮಾಡಿದ್ದರು. ಆದರೆ ಈಗಿನ ಬಿಜೆಪಿ.ಸರ್ಕಾರ ಇದನ್ನು ಮರೆತು 2 ಲಕ್ಷ 63 ಸಾವಿರ ಕೋಟಿ ರೂ.ಬಜೆಟ್‍ನಲ್ಲಿ 42 ಸಾವಿರ ಕೋಟಿ ರೂ.ಬಜೆಟ್‍ನಲ್ಲಿ ಮೀಸಲಿಡಬೇಕಿತ್ತು. ಕೇವಲ 28 ಸಾವಿರ ಕೋಟಿ ರೂ.ಇಟ್ಟಿದೆ. ಪರಿಶಿಷ್ಟ ಜಾತಿಗೆ ಶೇ.17 ಹಾಗೂ ಪರಿಶಿಷ್ಟ ವರ್ಗಕ್ಕೆ ಶೇ.7 ರಷ್ಟು ಮೀಸಲಾತಿ ಹೆಚ್ಚಿಸಿದ್ದು, ನಮ್ಮ ಸರ್ಕಾರ ಎಂದು ಬಿಜೆಪಿ.ಬೊಬ್ಬೆ ಹೊಡೆಯುತ್ತಿದೆ. ಸಮ್ಮಿಶ್ರ ಸರ್ಕಾರವಿದ್ದಾಗ ನಾನು ಉಪಮುಖ್ಯಮಂತ್ರಿಯಾಗಿದ್ದಾಗ ನಾಗಮೋಹನ್‍ದಾಸ್ ಸಮಿತಿ ಮಾಡಿದ್ದು, ಎಂದು ನೆನಪಿಸಿಕೊಂಡರು.

ಕೇಂದ್ರ ಮತ್ತು ರಾಜ್ಯದಲ್ಲಿ ಡಬ್ಬಲ್ ಇಂಜಿನ್ ಸರ್ಕಾರವಿದ್ದು, 9 ನೇ ಷೆಡ್ಯೂಲ್‍ಗೆ ಸೇರಿಸಿ ಸಂವಿಧಾನದಲ್ಲಿ ತಿದ್ದುಪಡಿ ಮಾಡದಿದ್ದರೆ ಮೀಸಲಾತಿ ಹೆಚ್ಚಳವಾಗಲ್ಲ. ಎನ್ನುವ ಸಂದೇಶ ರಾಜ್ಯಕ್ಕೆ ಹೋಗಬೇಕಾಗಿರುವುದರಿಂದ ಚಿತ್ರದುರ್ಗದಲ್ಲಿ ಎಸ್ಸಿ.ಎಸ್ಟಿ.ಗಳ ಸಮಾವೇಶ ಹಮ್ಮಿಕೊಂಡಿದ್ದೇವೆ. ಲಕ್ಷಾಂತರ ಜನ ಸೇರಲಿದ್ದಾರೆ. ಮಧ್ಯಕರ್ನಾಟಕ, ದಕ್ಷಿಣ ಕರ್ನಾಟಕ, ಉತ್ತರಕರ್ನಾಟಕ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಮಾವೇಶಕ್ಕೆ ಬರಲು ಅನುಕೂಲವಾಗಲಿದೆ ಎಂದರು.

ಮುಖ್ಯಮಂತ್ರಿ ಸರ್ವಪಕ್ಷಗಳ ಸಭೆ ಕರೆಯಬೇಕಿತ್ತು: ಕಾವೇರಿ ನೀರಿನ ಸಮಸ್ಯೆ, ಬೆಳಗಾವಿಯಲ್ಲಿ ಮಹಾರಾಷ್ಟ್ರ ಗಡಿ ವಿವಾದ, ರೈತರ ಸಮಸ್ಯೆಗಳಿದ್ದಾಗ ಸರ್ಕಾರ ಯಾವುದೇ ಇರಲಿ, ಯಾರೆ ಮುಖ್ಯಮಂತ್ರಿಯಾಗಿರಲಿ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಬಸ್‍ಗಳನ್ನು ಬಿಡುತ್ತಿಲ್ಲ. ಜನಗಳನ್ನು ಹೊಡೆಯುತ್ತಿದ್ದರೂ ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲವೆಂದರೆ ಮುಖ್ಯಮಂತ್ರಿ ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ನಾವುಗಳು ಸಂವಿಧಾನವನ್ನು ನಂಬಿರುವವರು. ಸಾಮಾನ್ಯ ವರ್ಗಕ್ಕೆ ಶೇ.10 ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರ ಕೊಡುತ್ತಿರುವುದು ಸಂವಿಧಾನದ ಆಶಯಗಳಿಗೆ ವಿರುದ್ದವಾದುದು ಎಂದು ಕಿಡಿಕಾರಿದರು.

ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ಸತೀಶ್‍ಜಾರಕಿಹೊಳಿ, ಉಪಾಧ್ಯಕ್ಷ ಹೆಚ್.ಆಂಜನೇಯ, ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ, ಮಾಜಿ ಸಚಿವರುಗಳಾದ ಕೆ.ಶಿವಮೂರ್ತಿನಾಯ್ಕ, ಡಿ.ಸುಧಾಕರ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕರುಗಳಾದ ಬಿ.ಜಿ.ಗೋವಿಂದಪ್ಪ, ತಿಪ್ಪೇಸ್ವಾಮಿ, ಮಾಜಿ ಕೇಂದ್ರ ಮಂತ್ರಿ ಕೆ.ಹೆಚ್.ಮುನಿಯಪ್ಪ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಯೋಗೇಶ್‍ಬಾಬು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *