ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಜ.06): ಸಾವಿತ್ರಿ ಬಾಪುಲೆ ದೇಶದ ಪ್ರಥಮ ಪ್ರಥಮ ಮಹಿಳಾ ಶಿಕ್ಷಕಿ ಎಂದು ದಲಿತ ಮುಖಂಡ ದುರುಗೇಶಪ್ಪ ತಿಳಿಸಿದರು.
ಸ್ಲಂ ಜನಾಂದೋಲನಾ-ಕರ್ನಾಟಕ ಜಿಲ್ಲಾ ಘಟಕದ ವತಿಯಿಂದ ಸ್ಲಂ ಜನಾಂದೋಲನಾ-ಕರ್ನಾಟಕ ಸಂಸ್ಥಾಪನಾ ದಿನದ ಅಂಗವಾಗಿ ಪತ್ರಕರ್ತರ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕ್ರಾಂತಿಜ್ಯೋತಿ ಸಾವಿತ್ರಿ ಬಾಪುಲೆರವರ ೧೯೧ ನೇ ಜಯಂತಿಯಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಾವಿತ್ರಿಬಾಪುಲೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ವಿವಾಹವಾದ ನಂತರ ಸಾವಿತ್ರಿಬಾಪುಲೆ ತನ್ನ ಪತಿ ಜ್ಯೋತಿ ಬಾಪುಲೆಯಿಂದ ಅಕ್ಷರ ಕಲಿತು ನಂತರ ಹೆಣ್ಣು ಮಕ್ಕಳನ್ನು ಸಂಘಟಿಸಿ ಅಕ್ಷರ ಕ್ರಾಂತಿ ಮೂಡಿಸಿದರು. ಆಗ ಬ್ರಾಹ್ಮಣಶಾಹಿಗಳಿಂದ ಸಾಕಷ್ಟು ಹಿಂಸೆ, ಅವಮಾನ ಅನುಭವಿಸಿ ಎಲ್ಲವನ್ನು ಸಹಿಸಿಕೊಂಡು ಹೆಣ್ಣು ಮಕ್ಕಳಲ್ಲಿ ಅಕ್ಷರ ಜ್ಞಾನವನ್ನು ಬಿತ್ತಿದ ಮೊದಲ ಶಿಕ್ಷಕಿ. ಹಾಗಾಗಿ ಅವರನ್ನು ಇಂದು ಎಲ್ಲರ ನೆನಪು ಮಾಡಿಕೊಳ್ಳಬೇಕು ಎಂದು ಹೇಳಿದರು.
ಸ್ಲಂ ಜನಾಂದೋಲನಾ-ಕರ್ನಾಟಕ ಹನ್ನೆರಡನೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಸ್ಲಂ ನಿವಾಸಿಗಳಿಗೆ ನಿವೇಶನ, ಮನೆ, ಮೂಲಭೂತ ಸೌಲಭ್ಯ, ಹಕ್ಕುಪತ್ರಗಳಿಗಾಗಿ ಮಂಜಣ್ಣ ಹಲವಾರು ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಅವರ ಹೋರಾಟಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಮತ್ತೊಬ್ಬ ದಲಿತ ಮುಖಂಡ ಬಿ.ರಾಜಪ್ಪ ಮಾತನಾಡಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸುವುದಕ್ಕಾಗಿ ಹೋರಾಡಿದ ಪ್ರಪ್ರಥಮ ಶಿಕ್ಷಕಿ ಸಾವಿತ್ರಿಬಾಯಿಪುಲೆ ಚಿಕ್ಕ ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳಿಗೆ ವಿವಾಹವಾಗುವುದನ್ನು ತಡೆದು ವೇಶ್ಯಾವಾಟಿಕೆ ವಿರುದ್ದ ಹೋರಾಡಿದರು ಎಂದು ಗುಣಗಾನ ಮಾಡಿದರು.
ಬ್ರಾಹ್ಮಣಶಾಹಿ, ಬಂಡವಾಳಶಾಹಿಗಳ ವಿರೋಧ ಕಟ್ಟಿಕೊಂಡು ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸಲು ಸಾವಿತ್ರಿಬಾಪುಲೆ ಹೋಗುವಾಗ ಕೆಲವು ಮೇಲ್ವರ್ಗದವರು ಸಗಣಿ ನೀರು ಎರಚಿ ಅವಮಾನಿಸುತ್ತಿದ್ದರು. ಇಷ್ಟೆಲ್ಲಾ ನೋವು ಸಂಕಟಗಳನ್ನು ತಾಳ್ಮೆಯಿಂದಲೆ ಸಹಿಸಿಕೊಂಡು ಹೆಣ್ಣು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕೆಂಬ ಛಲ ಅವರಲ್ಲಿತ್ತು. ಅಂತಹ ಶಿಕ್ಷಕಿಯನ್ನು ಪ್ರತಿಯೊಬ್ಬರು ಸ್ಮರಿಸಿಕೊಳ್ಳುವ ಅಗತ್ಯವಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಯೋಚಿಸಿ ಮತದಾನ ಮಾಡಿ. ಹಣ, ಆಮಿಷಕ್ಕೆ ನಿಮ್ಮ ಮತಗಳನ್ನು ಮಾರಿಕೊಳ್ಳಬೇಡಿ. ಇನ್ನೊಂದು ವರ್ಷದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಕ್ಷಣಿಕ ಆಸೆಗಾಗಿ ಪವಿತ್ರವಾದ ಮತಗಳನ್ನು ಮಾರಿಕೊಳ್ಳಬೇಡಿ. ಒಂದು ವೇಳೆ ನೀವುಗಳು ಮತಗಳನ್ನು ಮಾರಿಕೊಂಡರೆ ಚುನಾವಣೆಯಲ್ಲಿ ಗೆದ್ದು ಬಂದವರನ್ನು ಪ್ರಶ್ನಿಸುವ ಅಧಿಕಾರ ಕಳೆದುಕೊಳ್ಳುತ್ತೀರ ಎಂದು ಎಚ್ಚರಿಸಿದರು.
ಸ್ಲಂ ಜನಾಂದೋಲನಾ-ಕರ್ನಾಟಕ ಜಿಲ್ಲಾ ಸಂಚಾಲಕ ಮಂಜಣ್ಣ ಮಾತನಾಡಿ ಮನೆಯಿಂದ ಹೆಣ್ಣು ಮಕ್ಕಳು ಹೊರ ಬರುವುದೇ ಕಷ್ಟವಾಗಿದ್ದ ಅಂದಿನ ಕಾಲದಲ್ಲಿ ಸಾವಿತ್ರಿಬಾಪುಲೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸಲು ಹೋಗುವಾಗ ಅನೇಕ ಸಂಕಟ ಅವಮಾನಗಳನ್ನು ಎದುರಿಸಬೇಕಾಯಿತು. ಆದರೂ ಹೆದರಿ ಫಲಾಯನವಾಗಲಿಲ್ಲ. ಹೆಣ್ಣು ಮಕ್ಕಳಲ್ಲಿ ಶಿಕ್ಷಣ ಕ್ರಾಂತಿ ಹುಟ್ಟುಹಾಕಬೇಕೆಂಬುದು ಅವರ ಬಯಕೆಯಾಗಿತ್ತು. ಮೊದಲ ಶಿಕ್ಷಕಿ ಸಾವಿತ್ರಿಬಾಪುಲೆ ಎನ್ನುವುದನ್ನು ಯಾರು ಮರೆಯಬಾರದು ಎಂದು ನೆನಪಿಸಿದರು.
ಎಂ.ಮಹೇಶ್, ಭಾಗ್ಯಮ್ಮ, ಸುಶೀಲಮ್ಮ, ಮಹಾಲಿಂಗಪ್ಪ ಕುಂಚಿಗನಹಾಳ್ ವೇದಿಕೆಯಲ್ಲಿದ್ದರು.