ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿಗಳ ಪಟ್ಟಿ ಸೇರಿಸಬೇಕು : ಎನ್.ಡಿ.ಕುಮಾರ್

suddionenews
2 Min Read

ಚಿತ್ರದುರ್ಗ. ಫೆ.04 : ಸವಿತಾ ಸಮಾಜ ಬಾಂಧವರು ಶ್ರಮ ಹಾಗೂ ಕಾಯಕ ಜೀವಿಗಳಾಗಿದ್ದಾರೆ. ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಸುಂದರವಾಗಿ ಕಾಣುತ್ತಿದ್ದಾರೆ ಎಂದರೆ, ಇದರ ಹಿಂದೆ ಸವಿತಾ ಸಮಾಜದವರ ಶ್ರಮ ಅಡಿಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ, ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ವೃತ್ತಿ ಹಾಗೂ ಪ್ರವೃತ್ತಿಗಳು ಬೇರೆ, ಹಳೆಯ ಪದ್ದತಿಗಳಿಗೆ ಜೋತು ಬೀಳದೆ, ಸವಿತಾ ಸಮಾಜ ಬಾಂಧವರು ಇತರೆ ವೃತ್ತಿಗಳ ಕಡೆಗೂ ಮುಖ ಮಾಡಬೇಕು. ಸಣ್ಣ ಸಮಾಜಗಳು ಅಭಿವೃದ್ಧಿ ಹೊಂದಿ ಮುಖ್ಯವಾಹಿನಿಗೆ ಬರಲು, ಸರ್ಕಾರ ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಮೀಸಲಾತಿ ನೀಡಿದೆ. ಈ ಅವಕಾಶಗಳನ್ನು ಬಳಸಿಕೊಂಡು ಸಮಾಜದ ಇತರೆ ಮಕ್ಕಳಂತೆ ನಿಮ್ಮ ಮಕ್ಕಳು ಸಹ ಪ್ರಗತಿ ಹೊಂದಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಾಸ್ಟೆಲ್ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತೆರೆಯಲಾಗಿದೆ. ಶೈಕ್ಷಣಿಕವಾಗಿ ಮಕ್ಕಳು ಅಭಿವೃದ್ಧಿ ಹೊಂದಿದರೆ, ಮನೆಯ ವಾತಾವರಣ ಬದಲಾಗುತ್ತದೆ. ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ವೃತ್ತಿ ಸಂಬಂಧಿತ ನಾವಿನ್ಯತೆ ಗಳಿಸಲು ತರಬೇತಿ ನೀಡಲಾಗುತ್ತದೆ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಲವಾರು ಯೋಜನೆಗಳಿಗೆ ಸಬ್ಸಿಡಿಯೊಂದಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇದರ ಸದುಯೋಗ ಪಡಿದುಕೊಳ್ಳಬೇಕು. ಜಾತಿ ಮೂಲದಿಂದ ಇನ್ನೊಬ್ಬರನ್ನು ನಿಂದಿಸಿದರೆ ಮನಸ್ಸಿಗೆ ಬಹಳಷ್ಟು ದುಃಖವಾಗುತ್ತದೆ. ಸಾರ್ವಜನಿಕರು ಇದನ್ನು ಅರಿತು ಯಾರ ಮನಸ್ಸಿಗೂ ನೋವಾಗದಂತೆ ಮಾತನಾಡಬೇಕು. ಪರಿಶಿಷ್ಟ ಜಾತಿ ಪಟ್ಟಿಗೆ ಸವಿತಾ ಸಮಾಜವನ್ನು ಸೇರಿಸುವ ಸಲುವಾಗಿ ನೀಡಿದ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಸಮಾಜದ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿ, ಸವಿತಾ ಮಹರ್ಷಿ ಸವಿತಾ ಸಮಾಜ ಮೂಲ ಪುರುಷ. ಬ್ರಹ್ಮನ ಕಣ್ಣಿನಿಂದ ಜನಿಸಿದ ಇವರು, ಮದುವೆಗೆ ಪರಶಿವನನ್ನು ಶೃಂಗರಿಸಿ ಎಲ್ಲರ ಮೆಚ್ಚುಗೆ ಪಡೆದರು. ಸಂಗೀತದಲ್ಲೂ ಸಹ ಹೆಸರಾದವರು. ಇಂದಿಗೂ ಸಮಾಜ ಬಾಂಧವರು ಕುಲವೃತ್ತಿಯನ್ನು ನಂಬಿ ಬದುಕುತ್ತಿದಾರೆ. ಸಮಾಜದಲ್ಲಿ ಕಟ್ಟ ಕಡೆಯ ವ್ಯಕ್ತಿಗಳಾಗಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿಗಳ ಪಟ್ಟಿ ಸೇರಿಸಬೇಕು ಎಂದು ಒತ್ತಾಯಿಸಿದರು.

ಸಾಹಿತಿ ಹುರಳಿ ಎಂ ಬಸವರಾಜ್ ಮಾತನಾಡಿ, ಈ ಹಿಂದೆ ಹಳ್ಳಿಗಳಲ್ಲಿ ಸವಿತಾ ಸಮಾಜ ಬಾಂದವರು ಇತರರೊಂದಿಗೆ ಅನ್ಯೊನ್ಯತೆಯಿಂದ ಬಾಳುತ್ತಿದ್ದರು. ರೈತರು ತಾವು ಬೆಳೆದ ಬೆಳೆಗಳಲ್ಲಿ ಇವರಿಗೂ ಪಾಲು ನೀಡುತ್ತಿದ್ದರು. ಊರಿನ ಪ್ರತಿ ಮನೆಯ ಮಾಹಿತಿ ಕ್ಷೌರದ ಅಂಗಡಿಗಳಲ್ಲಿ ದೊರೆಯುತ್ತಿತ್ತು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಸವಿತಾ ಸಮಾಜ ಅಧ್ಯಕ್ಷ ಎನ್.ಚಂದ್ರಶೇಖರ್, ಜಿಲ್ಲಾ ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಆರ್.ಶ್ರೀನಿವಾಸ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಆರ್.ನಾಗರಾಜ್ ಸೇರಿದಂತೆ ಸವಿತಾ ಸಮಾಜದ ಮುಖಂಡರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಓ.ಮೂರ್ತಿ ಮತ್ತು ಸಂಗಡಿಗರು ಗೀತಗಾಯನ ಪ್ರಸ್ತುತ ಪಡಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *