ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಇದ್ದಕ್ಕಿದ್ದ ಹಾಗೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಭೇಟಿಯಾಗಿದ್ದಾರೆ. ಇದು ಕಾಂಗ್ರೆಸ್ ರಾಜಕಾರಣಿಗಳ ತಲೆಗೆ ಹುಳ ಬಿಟ್ಟಂತೆ ಆಗಿದೆ. ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ಸರ್ಕಾರಿ ನಿವಾಸದಲ್ಲಿ ವಿಜಯೇಂದ್ರ ಅವರನ್ನು ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಮೂಡಾ ಕೇಸಲ್ಲಿ ತನಿಖೆ ಎದುರಿಸುತ್ತಿದ್ದಾರೆ. ಹೀಗಾಗಿ ಬದಲಾವಣೆಯ ಕೂಗಿ ಜೋರಾಗಿಯೇ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ದಲಿತ ಸಿಎಂ ಚರ್ಚೆಯೂ ಮುನ್ನೆಲೆಗೆ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸತೀಶ್ ಜಾರಕಿಹೊಳಿ ಫುಲ್ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗಷ್ಟೇ ತುಮಕೂರಿನಲ್ಲಿ ಜಿ ಪರಮೇಶ್ವರ್ ಅವರನ್ನು ಭೇಟಿಯಾಗಿದ್ದರು. ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಅವರ ನಿವಾಸದಲ್ಲಿ ಗೌಪ್ಯ ಸಭೆಯನ್ನು ಮೂವರು ನಡೆಸಿದ್ದರು. ಈ ಎಲ್ಲಾ ನಡೆಗಳು ಕಾಂಗ್ರೆಸ್ ವಲಯದಲ್ಲಿ ಹಲವು ಅನುಮಾನಗಳನ್ನು ಮೂಡಿಸಿದೆ. ಇದರ ಬೆನ್ನಲ್ಲೇ ಬಿವೈ ವಿಜಯೇಂದ್ರ ಅವರನ್ನು ಭೇಟಿಯಾಗಿದ್ದಾರೆ.
ಈ ಭೇಟಿ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದು ಹೀಗೆ, ಶಿವಮೊಗ್ಗ-ಶಿಕಾರಿಪುರ ಮಾರ್ಗದಲ್ಲಿರುವ ಕುಟ್ರಳ್ಳಿ ಬಳು ಟೋಲ್ ತೆರವು ಮಾಡುವಂತೆ ಮನವಿ ಮಾಡಿದ್ದೇನೆ. ಈ ಟೋಲ್ ಬೇರೆಡೆ ಶಿಫ್ಟ್ ಮಾಡಲು ಮನವಿ ಮಾಡಿದ್ದೇನೆ. ರಾಜ್ಯ ಹೆದ್ದಾರಿಯಲ್ಲಿ ಎರಡು ಟೋಲ್ ಬರುತ್ತದೆ. ಇದರಿಂದ ರೈತರಿಗೆ ಅನಾನುಕೂಲವಾಗಲಿದೆ. ಮಕ್ಕಳು ಶಾಲೆಗೆ ಹೋಗುವುದಕ್ಕೆ ತೊಂರೆ ಆಗುತ್ತಿದೆ. ಟೋಲ್ ಶಿಫ್ಟ್ ಗೆ ಹೋರಾಟಗಳು ನಡೆದಿವೆ. ಸಚಿವರು ಕೂಡ ಸಕಾರಾತ್ಮಕವಾಗಿ ಭರವಸೆ ನೀಡಿದ್ದಾರೆ ಎಂದಿದ್ದಾರೆ.