ಬಾಗಲಕೋಟೆ: ರಾಜ್ಯದಲ್ಲಿ ಈಗಾಗಲೇ ಸಿಎಂ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಅದರಲ್ಲೂ ದಲಿತ ಸಿಎಂ ವಿಚಾರ ಕೂಡ ಆಗಾಗ ಸದ್ದು ಮಾಡಿ, ಸುಮ್ಮನಾಗುತ್ತದೆ. ದಲಿತ ಸಿಎಂ ರೇಸ್ ನಲ್ಲಿ ಹಲವರಿದ್ದಾರೆ. ಇದೀಗ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ದಲಿತ ಸಿಎಂ ವಿಚಾರದ ಪರ ಧ್ವನಿ ಎತ್ತಿದ್ದಾರೆ. ರಾಜ್ಯದಲ್ಲಿ ದಲಿತರು ಯಾಕೆ ಸಿಎಂ ಆಗಬಾರದು ಎಂದು ಪ್ರಶ್ನಿಸಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ. ಅವರ ಬೆನ್ನಿಗೆ ನಾವೆಲ್ಲಾ ನಿಲ್ಲಲಿದ್ದೇವೆ. ಸಿಎಂ ಹುದ್ದೆ ಕೆಲವೇ ಸಮುದಾಯಗಳ ಸ್ವತ್ತಾ..? ಸಿಎಂ ಹುದ್ದೆಯನ್ನು ಯಾರಾದರೂ ಗುತ್ತಿಗೆ ಪಡೆದುಕೊಂಡಿದ್ದಾರಾ..? ದಲಿತರು ಯಾಕೆ ಸಿಎಂ ಆಗಬಾರದು ಎಂದು ಪ್ರಶ್ನಿಸಿರುವ ಸ್ವಾಮೀಜಿ, ದಲಿತರು ಮತ ಬ್ಯಾಂಕ್ ಮಾತ್ರ ಆಗಿರಬೇಕಾ ಎಂದು ಕೇಳಿದ್ದಾರೆ. ದಲಿತರು ಸಿಎಂ ಆಗಲಿ ಎಂಬ ಔದಾರ್ಯ ಹೊಂದಿದ್ದರೆ ಹೇಗೆ..? ನಾಡಿನ ದೊರೆ ಸಿದ್ದರಾಮಯ್ಯ ಬಗ್ಗೆ ಬಹಳಷ್ಟು ಗೌರವವಿದೆ. ಸಾಮಾಜಿಕ ನ್ಯಾಯದ ಪರ ಇರಿವವರು ಸಿದ್ದರಾಮಯ್ಯ. ಎಲ್ಲೋ ಒಂದು ಕಡೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆಗಳು ಆದರೆ, ಆಗ ದಲಿತರು ಸಿಎಂ ಆಗಬೇಕೆಂದು ಬಯಸಿದ್ದಾರೆ.
ನಮ್ಮ ಹಾಗೂ ಕಾರ್ಯಕರ್ತರ ಆಶಯವಿರಬಹುದು. ಆದರೆ ಪಕ್ಷದ ತೀರ್ಮಾನ ಕೂಡ ಮುಖ್ಯವಾಗುತ್ತದೆ. ಪಕ್ಷ ದೊಡ್ಡದು. ಸತೀಶ್ ಜಾರಕಿಹೊಳಿ ಅವರು ಇದಕ್ಕಾಗಿ ಕಾಯಬೇಕು ಎಂದು ಹೇಳುವ ಮೂಲಕ ದಲಿತ ಸಿಎಂ ವಿಚಾರವನ್ನು ಮತ್ತೊಮ್ಮೆ ಮುನ್ನಲೆಗೆ ತಂದಿದ್ದಾರೆ. ದಲಿತ ಸಿಎಂ ಆಗಲಿ ಅಂತ ಆಗಾಗ ಹೇಳುತ್ತಲೆ ಇರುತ್ತಾರೆ. ಇತ್ತಿಚೆಗಷ್ಟೇ ಸಚಿವ ಕೆ ಎನ್ ರಾಜಣ್ಣ ಕೂಡ, ಪರಮೇಶ್ವರ್ ಪರ ಬ್ಯಾಟ್ ಬೀಸಿದ್ದರು.