ಬೆಂಗಳೂರು: ಇಂದು ನಾಡಿನೆಲ್ಲೆಡೆ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಹೊಸ ಫಸಲಿನೊಂದಿಗೆ ಸಂಕ್ರಾಂತಿ ಆಚರಣೆ ಜೋರಾಗಿದೆ. ಹಿಂದೂಗಳಿಗೆ ಇದು ವಿಶೇಷವಾದ ಹಬ್ಬವಾಗಿದೆ. ಸೂರ್ಯ ತನ್ನ ಪಥ ಬದಲಿಸುವ ದಿನ. ಸೂರ್ಯದೇವನು ತನ್ನ ಪಥ ಬದಲಿಸುವುದಕ್ಕೆ ಮಹದೇವ ಅಂದ್ರೆ ಈಶ್ವರನ ಅಪ್ಪಣೆ ಕೇಳುತ್ತಾನೆ ಎಂಬ ನಂಬಿಕೆ ಇದೆ. ಅದೇ ರಾಜ್ಯದ ಕೆಲವೊಂದು ಕಡೆ ಸೂರ್ಯ ರಶ್ಮಿ ಸ್ಪರ್ಶದ ಕಥೆ.
ಕೆಲವು ದೇವಾಲಯಗಳಲ್ಲಿ ಗರ್ಭಗುಡಿಯ ಮೂರ್ತಿಗಳಿಗೆ ಸೂರ್ಯದೇವನ ಸ್ಪರ್ಶವಾಗುತ್ತದೆ. ಈ ಮೂಲಕ ಸೂರ್ಯ ದೇವನು ಪಥ ಬದಲಿಸಲು ಮಹದೇವನ ಅಪ್ಪಣೆ ಕೇಳಿದಂತೆ. ಅದರಲ್ಲೂ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯ, ಮಂಡ್ಯದ ಕಾಶಿ ಚಂದ್ರಮೌಳೇಶ್ವರ ದೇವಸ್ಥಾನನದಲ್ಲಿ ಇದು ಬಹಳ ಮುಖ್ಯವಗಿ ಕಾಣಿಸುತ್ತದೆ. ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ಸೂರ್ಯ ರಶ್ಮಿ ಸ್ಪರ್ಶ ಮಾಡುತ್ತದೆ. ಪಂಚಾಂಗದ ಪ್ರಕಾರ ಜನವರಿ 14ರಂದು ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಪುಣ್ಯಕಾಲ ಜ.15ರವರೆಗೆ ಇರುತ್ತದೆ. ಹೀಗಾಗಿ ಈ ಎರಡು ದಿನ ಮಕರ ಸಂಕ್ರಾಂತಿ ಹಬ್ಬ ಆಚರಿಸುವುದು ಅನಾದಿ ಕಾಲದಿಂದ ನಡೆದುಕೊಂಡು ಬಂದ ವಾಡಿಕೆ.
ಬೆಂಗಳೂರಿನ ಗವಿಗಂಗಾಧರೇಶ್ವ ದೇವಸ್ಥಾನ ನಗರದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಪ್ರತಿವರ್ಷ ಮಕರ ಸಂಕ್ರಮಣದ ದಿನದಂದು ಸೂರ್ಯ ರಶ್ಮಿಯು ಶಿವನ ವಾಹನವಾದ ನಂದಿಯ ಮೇಲೆ ಬೀಳುತ್ತದೆ. ಬಳಿಕ ಗರ್ಭಗುಡಿಯೊಳಗಿನ ಶಿವಲಿಂಗವನ್ನು ಸ್ಪರ್ಶಿಸುತ್ತದೆ. ನಿರ್ದಿಷ್ಟ ಶಿಲೆಯಿಂದ ನಿರ್ಮಿತವಾಗಿರುವ ಈ ದೇವಸ್ಥಾನದ ಗರ್ಭಗೃಹದೊಳಗೆ ವರ್ಷಪೂರ್ತಿ ಸೂರ್ಯನ ಬೆಳಕು ಪ್ರವೇಶಿಸುವುದಿಲ್ಲ. ಆದರೆ ಮಕರ ಸಂಕ್ರಾಂತಿಯಂದು ಮಾತ್ರ ಪ್ರವೇಶಿಸುವಷ್ಟು ನಿಖರವಾಗಿ ಇಲ್ಲಿನ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.