ಸುದ್ದಿಒನ್ ವೆಬ್ ಡೆಸ್ಕ್
ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಸಂಕಷ್ಟ ಚತುರ್ಥಿ ಆಚರಣೆ ಬಹಳ ಪ್ರಾಮುಖ್ಯತೆ ಪಡೆದಿದೆ. ಈ ಪವಿತ್ರ ದಿನವನ್ನು ಗಣೇಶನಿಗೆ ಸಮರ್ಪಿಸಲಾಗಿದೆ. ಪ್ರತಿ ವರ್ಷ ಪುಷ್ಯ ಮಾಸದ ಕೃಷ್ಣ ಪಕ್ಷದ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಅಥವಾ ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ.
Sankashti Chaturthi January 2023 : ಪುರಾಣಗಳ ಪ್ರಕಾರ, ಗಣೇಶನನ್ನು ವಿಘ್ನ ನಿವಾರಕನೆಂದು ಎಂದು ಕರೆಯುತ್ತೇವೆ. ಅದಕ್ಕಾಗಿಯೇ ನಮ್ಮಲ್ಲಿ ಯಾರಾದರೂ ಯಾವುದೇ ಹೊಸ ಕೆಲಸ ಅಥವಾ ಇನ್ನೇನಾದರೂ ವ್ಯಾಪಾರ ವಹಿವಾಟು ಪ್ರಾರಂಭಿಸುವಾಗ ನಮ್ಮ ಕೆಲಸದಲ್ಲಿ ಯಾವುದೇ ಅಡಚಣೆಯಾಗದಂತೆ ಗಣಪತಿಯನ್ನು ಪೂಜಿಸುತ್ತೇವೆ.
ಜೀವನದಲ್ಲಿ ತೀವ್ರ ಸಂಕಷ್ಟಗಳ ಸುಳಿಗೆ ಸಿಲುಕಿದವರು ಸಂಕಷ್ಟ ಚತುರ್ಥಿ ವ್ರತವನ್ನು ಆಚರಣೆ ಮಾಡಿದರೆ ಅವರ ಕಷ್ಟಗಳೆಲ್ಲಾ ದೂರವಾಗುತ್ತವೆ ಎಂಬ ನಂಬಿಕೆಯಿದೆ. ಈ ವಿಶೇಷ ಪೂಜೆಯನ್ನು ಎರಡು ರೀತಿಯಲ್ಲಿ ಮಾಡಲಾಗುತ್ತದೆ.
ಅಮವಾಸ್ಯೆಯ ನಂತರ ಬರುವ ಚತುರ್ಥಿಯನ್ನು ವರದ ಚತುರ್ಥಿ ಎಂದು ಕರೆಯಲಾಗುತ್ತದೆ. ಹಾಗೆಯೇ ಹುಣ್ಣಿಮೆಯ ನಂತರ ಬರುವ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯುತ್ತಾರೆ. ಈ ವರ್ಷದ ಸಂಕಷ್ಟ ಚತುರ್ಥಿ 10 ನೇ ಜನವರಿ 2023 ರ ಮಂಗಳವಾರ ಬಂದಿದೆ.
ಈ ಶುಭ ದಿನದಂದು ಉಪವಾಸವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಂಕಷ್ಟ ಚತುರ್ಥಿಯ ಶುಭ ಮುಹೂರ್ತ ಹಾಗೂ ಅದರ ಮಹತ್ವದ ಬಗ್ಗೆ ತಿಳಿಯೋಣ…
ಈ ಬಾರಿಯ ಚತುರ್ಥಿಯು ಮಂಗಳವಾರ 10 ಜನವರಿ 2023 ರಂದು ಮಧ್ಯಾಹ್ನ 12:09 ಗಂಟೆಗೆ ಪ್ರಾರಂಭವಾಗಿ, ಮರುದಿನ 11ನೇ ಜನವರಿ 2023 ರಂದು ಮಧ್ಯಾಹ್ನ 2:31 ಗಂಟೆಯವರೆಗೂ ಇರುತ್ತದೆ. ಈ ಶುಭ ದಿನದಂದು ಚಂದ್ರನನ್ನು ಗಣೇಶನ ಜೊತೆಗೆ ಪೂಜಿಸಬೇಕು.
ಪೂಜಾ ವಿಧಾನ :
ಸಂಕಷ್ಟ ಚತುರ್ಥಿಯ ದಿನ ಬ್ರಮ್ಹಾ ಮುಹೂರ್ತದಲ್ಲಿಯೇ ಎದ್ದು ಸ್ನಾನ ಮಾಡಬೇಕು. ಇಡೀ ಮನೆಯನ್ನು ಸ್ವಚ್ಛಗೊಳಿಸಿ. ಪೂಜಾ ಮಂದಿರದಲ್ಲಿ ಗಣೇಶನ ಪ್ರತಿಮೆ ಅಥವಾ ಫೋಟೋವನ್ನು ಅಲಂಕರಿಸಬೇಕು ಮತ್ತು ದೀಪಾರಾಧನೆ ಮಾಡಬೇಕು.
ಸಂಕಷ್ಟ ಚತುರ್ಥಿ ವ್ರತವನ್ನು 3,5, 11 ಅಥವಾ 21 ತಿಂಗಳು ಆಚರಿಸಬೇಕು.
ಪುರಾಣಗಳ ಪ್ರಕಾರ, ನಾರದರು ಹೇಳಿದಂತೆ ಶ್ರೀ ಸಂಕಟಹರ ಗಣೇಶ ಸ್ತೋತ್ರವನ್ನು 4 ಬಾರಿ ಪಠಿಸುವುದರಿಂದ ವಿನಾಯಕನ ಕೃಪೆಯೊಂದಿಗೆ ಕೆಲವು ವಿಘ್ನಗಳು ದೂರವಾಗುತ್ತವೆ. ಈ ಪವಿತ್ರವಾದ ದಿನದಂದು ಮಧ್ಯಾಹ್ನ ಗಣೇಶನನ್ನು ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಲಂಬೋದರನನ್ನು ಆರಾಧಿಸುವುದರಿಂದ ಫಲ ಪ್ರಾಪ್ತಿಯಾಗುತ್ತದೆ. ಸಂಕಷ್ಟ ಚತುರ್ಥಿಯಂದು ಮನೆಯಲ್ಲಿಯೇ ಮಾಡಿದ ಲಡ್ಡು ಮತ್ತು ಮೋದಕಗಳನ್ನು ಅರ್ಪಿಸಬೇಕು. ಪೂಜೆ ಮುಗಿದ ನಂತರ ಮಂಗಳಾರತಿ ಮಾಡಿದ ನಂತರ ಪೂಜೆಯಲ್ಲಿ ಏನಾದರೂ ತಪ್ಪಿದ್ದರೆ ಕ್ಷಮಿಸು ತಂದೆ ಎಂದು ಪ್ರಾರ್ಥಿಸಬೇಕು..
ಸಂಕಷ್ಟ ಚತುರ್ಥಿಯ ಮಹತ್ವ..
ಸಂಕಷ್ಟ ಚತುರ್ಥಿಯಂತಹ ಶುಭ ದಿನದಂದು ಉಪವಾಸ ಮಾಡುವುದರಿಂದ ಗಣೇಶನ ಕೃಪೆ ಲಭಿಸುತ್ತದೆ ಎಂಬ ನಂಬಿಕೆಯಿದೆ. ಇದಲ್ಲದೆ, ಅನೇಕ ಜನರು ಈ ವ್ರತ ಮಾಡುವುದರಿಂದ ಜೀವನದಲ್ಲಿ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ ಮತ್ತು ಅವರ ಎಲ್ಲಾ ಆಸೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಅದಕ್ಕಾಗಿಯೇ ಈ ದಿನ ಉಪವಾಸ ಮಾಡಬೇಕು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಸೂಚನೆ : ಇಲ್ಲಿ ಒದಗಿಸಲಾದ ಎಲ್ಲಾ ಮಾಹಿತಿಗಳು ಮತ್ತು ಪರಿಹಾರಗಳು ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಇವುಗಳನ್ನು ಕೇವಲ ಊಹೆಗಳ ಆಧಾರದ ಮೇಲೆ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.