ಸೂರ್ಯನ ಉದಯ ತಾವರೆಗೆ ಜೀವಾಳ,
ಚಂದ್ರಮನುದಯ ನೈದಿಲೆಗೆ ಜೀವಾಳ,
ಕೂಪರ ಠಾವಿನಲ್ಲಿ ಕೂಟ ಜೀವಾಳವಯ್ಯಾ,
ಒಲಿದ ಠಾವಿನಲ್ಲಿ ನೋಟ ಜೀವಾಳವಯ್ಯಾ.ಕೂಡಲಸಂಗನ ಶರಣರ ಬರವೆನಗೆ ಪ್ರಾಣ ಜೀವಾಳವಯ್ಯಾ.
ಭಾರತ ಹಲವು ಧರ್ಮ, ಜಾತಿ, ಭಾಷೆ,
ಸಂಸ್ಕೃತಿ, ಜನಾಂಗಗಳ ಶಾಂತಿಯ ತೋಟ.
ಇಲ್ಲಿ ಅನೇಕ ಹಬ್ಬ, ಹುಣ್ಣಿಮೆಗಳ ಆಚರಣೆ ಪರಂಪರೆಯಿಂದಲೂ ನಡೆದುಕೊಂಡು
ಬಂದಿದೆ. ಇಂಥಹ ಹಬ್ಬಗಳಲ್ಲಿ ಭಾರತೀಯರ ಪಾಲಿಗೆ ತುಂಬಾ ಮಹತ್ವದ ಹಬ್ಬ ಯುಗಾದಿ.
ಆ ಪದವೇ ಹೇಳುವಂತೆ ಆ ವರ್ಷದ ಮೊದಲದಿನ. ಯುಗ ಯುಗಗಳನ್ನು ಕಳೆದರೂ
ಯುಗಾದಿ ಮತ್ತೆ ಮರಳಿ ಬರುತ್ತದೆ.
ಭಾರತೀಯರಿಗೆ ಯುಗಾದಿಯೇ ಹೊಸ ವರ್ಷ. ಅಲ್ಲಿಂದಲೇ ನಮ್ಮ ಚಟುವಟಿಕೆಗಳು ಪ್ರಾರಂಭವಾಗುವುದು. ಪ್ರಕೃತಿಯಲ್ಲಿ ಅನೇಕ ಬದಲಾವಣೆಗಳನ್ನು ಈ ಸಂದರ್ಭದಲ್ಲಿ ಕಾಣಬಹುದು.
‘ಲೋಕದ ಚೇಷ್ಟೆಗೆ ರವಿ ಬೀಜ’ ಎಂದು ಅಕ್ಕಮಹಾದೇವಿಯವರು ಹೇಳಿದ್ದಾರೆ. ಪ್ರಕೃತಿಯ ವ್ಯಾಪಾರ ನಿಂತಿರುವುದು ಸೂರ್ಯ, ಚಂದ್ರರ ಚಲನೆಯ ಮೇಲೆ. ಅದಕ್ಕನುಗುಣವಾಗಿಯೇ ಹಬ್ಬಗಳ ಆಚರಣೆಯೂ ನಡೆಯುವುದು.
ಯುಗಾದಿ ಹಬ್ಬದ ಸಂದರ್ಭದಲ್ಲಿ `ಹಳೆಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು’
ಎನ್ನುವಂತೆ ಗಿಡ ಮರಗಳು ಹಣ್ಣೆಲೆಗಳನ್ನು
ಕಳಚಿಕೊಂಡು ಹೊಸ ಚಿಗುರೊಡೆದು ಪ್ರಕೃತಿಮಾತೆಗೆ ಹಸಿರು ಸೀರೆ ಉಡಿಸಿದಂತೆ ಕಾಣುವುದು. ಯುಗಾದಿಯ ಸಂದರ್ಭದಲ್ಲಿ ಬೇವಿನ ಸೊಪ್ಪನ್ನು ನೀರಲ್ಲಿ ಹಾಕಿ ಸ್ನಾನ ಮಾಡುವುದು,ಬೇವು-ಬೆಲ್ಲ ತಿನ್ನುವುದು ಪದ್ಧತಿ. ಬೇವಿನ ನೀರು ಅನೇಕ ಚರ್ಮರೋಗಗಳನ್ನು ವಾಸಿ ಮಾಡುವುದು. ಬೇವು ಕಹಿಯನ್ನು
ನೆನಪಿಸಿದರೆ ಬೆಲ್ಲ ಸಿಹಿಯನ್ನು ನೆನಪಿಸುವುದು. ಬದುಕು ಸಿಹಿ, ಕಹಿಗಳ
ಸಮ್ಮಿಶ್ರಣ. ಸಿಹಿ ಬಂದಾಗ ಹಿಗ್ಗದೆ, ಕಹಿ
ಬಂದಾಗ ಕುಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎನ್ನುವುದು ಬೇವು, ಬೆಲ್ಲ
ತಿನ್ನುವ ಉದ್ದೇಶ. ಜೊತೆಗೆ ಹಿಂದಿನ ಕಹಿ
ಪ್ರಸಂಗಗಳನ್ನು ಮರೆತು ಎಲ್ಲರೂ ಒಂದಾಗಿ ಪ್ರೀತಿಯಿಂದ ಬಾಳೋಣ ಎನ್ನುವ ಅರ್ಥವೂ ಅಡಗಿದೆ.
ನಮ್ಮ ಜನರು ಆಗಾಗ ಬಳಸುವ
ಪದಗಳೆಂದರೆ ನಾಗರೀಕತೆ ಮತ್ತು ಸಂಸ್ಕೃತಿ. ಅವೆರಡರ ಸಮ್ಮಿಲನದಿಂದ ಆದರ್ಶ ಬದುಕಿಗೆಅಡಿಪಾಯ ಆಗಬೇಕಾಗಿತ್ತು. ಆದರೆ, ಇಂದು ನಾಗರಿಕತೆಯ ಅಬ್ಬರದಲ್ಲಿ ಸಂಸ್ಕೃತಿ ಕಣ್ಮರೆಯಾಗುವ ಪರಿಸ್ಥಿತಿ ಬರುತ್ತಿದೆ.
ನಾಗರಿಕತೆ ಬಾಹ್ಯ ಬದುಕಿನ ವೈಭವದ ಪ್ರತೀಕವಾದರೆ ಸಂಸ್ಕೃತಿ ಆಂತರಿಕ ಆದರ್ಶ
ಬದುಕಿನ ಕನ್ನಡಿ. ನಾಗರಿಕತೆ ಕೇವಲ
ಬುದ್ಧಿಯನ್ನು ಅವಲಂಬಿಸಿದ್ದರೆ ಸಂಸ್ಕೃತಿ
ಬುದ್ಧಿ, ಹೃದಯಗಳ ವಿದ್ಯುದಾಲಿಂಗನ. ಬುದ್ಧಿ,ಹೃದಯಗಳ ಸಮ್ಮಿಲನದಿಂದ ಮಾತ್ರ
ನೆಮ್ಮದಿಯ ಬದುಕು ಸಾಧ್ಯ.
ಪ್ರಕೃತಿಮಾತೆ ಯಾವಾಗಲೂ ಸಂದೇಶ
ಕೊಡುತ್ತಲೇ ಇರುವುದು. ಪ್ರಕೃತಿಯಲ್ಲಿ
ಮಾನವನಂತೆ ದ್ವೇಷ, ಮತ್ಸರ, ಅಸೂಯೆ
ಇತ್ಯಾದಿ ಇಲ್ಲ. ಅಲ್ಲಿ ಕೊಡುವುದು ಮಾತ್ರ
ಇದೆ. ಕೊಟ್ಟೆನೆಂಬ ಅಹಂಭಾವ ಇಲ್ಲ.
ಅದಕ್ಕಾಗಿಯೇ ಬಸವಣ್ಣನವರು
`ಮಾಡಿದೆನೆಂಬುದು ಮನದಲ್ಲಿ ಹೊಳೆದರೆ
ಏಡಿಸಿ ಕಾಡಿತ್ತು ಶಿವನ ಡಂಗುರ’ ಎನ್ನುವರು.
ಪ್ರಕೃತಿಮಾತೆ ಎಷ್ಟೆಲ್ಲ ಒಳಿತನ್ನು ಮಾಡಿದರೂ ನಾನು ಮಾಡಿದೆ ಎಂದು ಜಂಬ
ಕೊಚ್ಚಿಕೊಳ್ಳುವುದಿಲ್ಲ. ಅದರಿಂದ ಮಾನವ ಪಾಠ ಕಲಿತರೆ ಮಾತ್ರ ನಮ್ಮ ಹಬ್ಬ
ಹುಣ್ಣಿಮೆಗಳಿಗೆ ವಿಶೇಷ ಮೆರಗು, ಅರ್ಥ
ಬರುವುದು. ಇಲ್ಲವಾದರೆ ಅವು ಸಹ
ಸಾಂಪ್ರದಾಯಕ ಆಚರಣೆಗಳಾಗಿ ಕೊನೆಗೆ
ಮನುಷ್ಯರನ್ನು ಮೂಢರನ್ನಾಗಿ,
ಕಂದಾಚಾರಿಗಳನ್ನಾಗಿ ಮಾಡಬಹುದು.
ಮನುಷ್ಯ ಹಬ್ಬಗಳ ನೆಪದಲ್ಲಾದರೂ ದ್ವೇಷ ಭಾವನೆಯನ್ನು ದೂರ ತಳ್ಳಿ ಪ್ರೀತಿ, ವಿಶ್ವಾಸ,
ದಯೆ, ಕೃತಜ್ಞತಾ ಭಾವವನ್ನು
ಅಳವಡಿಸಿಕೊಳ್ಳುವ ಸಂಕಲ್ಪ ತಳೆಯಬೇಕು. ಈ ಗುಣಗಳು ಹೊರಗಿನಿಂದ ಹಣ ಕೊಟ್ಟು ಕೊಳ್ಳುವಂತಹವುಗಳಲ್ಲ. ನಮ್ಮೊಳಗೇ ಇರುವ ಅಪಾರ ಸಂಪತ್ತು. ಆ ಸಂಪತ್ತನ್ನು
ಸದ್ವಿನಿಯೋಗ ಮಾಡಿಕೊಂಡಾಗ ಬದುಕು
ಹರ್ಷದಾಯಕವಾಗಲು ಸಾಧ್ಯ.
ಯುಗಾದಿ ಹಬ್ಬದಲ್ಲಿ ಮೈ ಕೈಗಳಿಗೆಲ್ಲ ಎಣ್ಣೆ
ಬಳಿದುಕೊಂಡು ಆಟ ಆಡಿ, ಸ್ನಾನ
ಮಾಡುವರು. ನಂತರ ಹೊಸ ಬಟ್ಟೆಗಳನ್ನು
ಧರಿಸಿ, ವಿವಿಧ ರೀತಿಯ ಆಹಾರ
ಸ್ವೀಕರಿಸುವರು. ಯುಗಾದಿ ಹಬ್ಬದಲ್ಲಿ ಚಂದ್ರದರ್ಶನ ಮಾಡುವ ಪದ್ಧತಿಯೂ ಇದೆ. ಚಂದ್ರ ಕಾಣಲಿಲ್ಲ ಎಂದು ಮರುದಿನ ಮತ್ತೆ ಹೋಳಿಗೆ ಊಟ ಮಾಡುವ ಪದ್ಧತಿ. ಆಗ ಪಂಚಾಂಗ
ಶ್ರವಣವೂ ನಡೆಯುವುದು. ಮಳೆ, ಬೆಳೆ,
ಭವಿಷ್ಯ ಕೇಳಿ ಮುಂದಿನ ವರ್ಷದ ಕನಸುಗಳನ್ನು ಕಟ್ಟಿಕೊಳ್ಳುವವರು ಸಾಕಷ್ಟು ಜನರು.
ಜಗಳ, ದ್ವೇಷ, ಅನುಮಾನ ಇನ್ನೇನೇನೋ
ಕಾರಣದಿಂದ ಬಹುದಿನಗಳಿಂದ ಒಬ್ಬರ ಮುಖ ಒಬ್ಬರು ನೋಡದಿದ್ದರೂ ಚಂದ್ರದರ್ಶನ
ಪಡೆದ ನಂತರ ಪರಸ್ಪರ ಕೈ ಕುಲುಕಿ, ಕೈ ಮುಗಿದು ಇಲ್ಲವೇ ಪಾದನಮಸ್ಕಾರ ಮಾಡಿ
ವಿಶ್ವಾಸದಿಂದ ಬಾಳೋಣ ಎನ್ನುವ ಭಾವನೆ
ಬೆಳೆಸಿಕೊಳ್ಳುವರು. ಒಟ್ಟಾರೆ ಯುಗಾದಿ ಹಬ್ಬ ಎಲ್ಲರ ಮನಸ್ಸುಗಳನ್ನು ಹಸನು ಮಾಡುವ,
ಒಟ್ಟುಗೂಡಿಸುವ ಕಾರ್ಯ ಮಾಡುವುದು. ಬೇಂದ್ರೆಯವರ ಪದ್ಯ ಯುಗಾದಿಯ ಸಂದೇಶ ಸಾರುವಂತಿದೆ.
ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ಹೊಂಗೆ ಹೂವ ತೊಂಗಲಲಿ,
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.
ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ.
ಒಂದೇ ಒಂದು ಜನ್ಮದಲಿ
ಒಂದೇ ಬಾಲ್ಯ, ಒಂದೇ ಹರೆಯ
ನಮಗದಷ್ಟೆ ಏತಕೋ ?
ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ ?
ಎಲೆ ಸನತ್ಕುಮಾರ ದೇವ,
ಎಲೆ ಸಾಹಸಿ ಚಿರಂಜೀವ,
ನಿನಗೆ ಲೀಲೆ ಸೇರದೋ.
ಯುಗ ಯುಗಗಳು ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ತರಳಬಾಳು ಶಾಖಾ ಮಠ, ಸಾಣೇಹಳ್ಳಿ, ಹೊಸದುರ್ಗ ತಾಲೂಕು
ಮೊ.ನಂ: 9448395594