ಬೆಂಗಳೂರು : ಸಾರಾಂಶ ಸಿನಿಮಾದ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ನಶೆಯೋ ನಕಾಶೆಯೋ ಎಂಬ ಹಾಡು ಇದಾಗಿದೆ. ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಉದಿತ್ ಹರಿತಾಸ್ ಸಂಗೀತ ನಿರ್ದೇಶನದಲ್ಲಿ ಹಾಡು ಅದ್ಭುತವಾಗಿ ಮೂಡಿ ಬಂದಿದೆ.
ಸೂರ್ಯ ವಸಿಷ್ಠ ನಿರ್ದೇಶನದ `ಸಾರಾಂಶ’ ಸಿನಿಮಾ ಆರಂಭದಿಂದಾನು ಒಂದಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಅದಕ್ಕೆ ತಕ್ಕುದಾದ ವಿಡಿಯೋ ಸಾಂಗ್ ರಿಲೀಸ್ ಮಾಡಲಾಗಿದೆ. ಸದ್ಯ ರಿಲೀಸ್ ಆಗಿರುವ ಸಾರಾಂಶದ ನಶೆಯ ನಕಾಶೆ ಚೆಂದದ ಹಾಡಿನ ಮೂಲಕ ಪಸರಿಸುವಂತಾಗಿದೆ. ಎಲ್ಲರ ಮನಸ್ಸನ್ನು ಖುಷಿಗೊಳಿಸಿದೆ. ಈ ವೀಡಿಯೋ ಸಾಂಗ್ ಸಂಗೀತ, ಸಾಹಿತ್ಯದಾಚೆಗೂ ವಿಶೇಷತೆಗಳನ್ನೊಳಗೊಂಡಿದೆ. ಸಾಮಾನ್ಯವಾಗಿ ಒನ್ ಟೇಕ್ ಸಾಂಗ್ ಎಂಬ ಪರಿಕಲ್ಪನೆಯನ್ನು ದೃಷ್ಯಕ್ಕೆ ಒಗ್ಗಿಸುವುದು ವಿರಳ. ಅಂಥಾದ್ದೊಂದು ಅಪರೂಪದ ಚೌಕಟ್ಟಿನಲ್ಲಿ ಈ ಹಾಡು ರೂಪುಗೊಂಡಿದೆ. ಇನ್ನುಳಿದಂತೆ, ಕಥೆಗೆ ಪೂರಕವಾಗಿ ಸೂಕ್ಷ್ಮ ಕಾನ್ಸೆಪ್ಟಿನಲ್ಲಿ ಈ ಹಾಡು ಸಿದ್ಧಗೊಂಡಿದೆ. ಪ್ರತಿಯೊಬ್ಬರನ್ನೂ ಕಾಡುವ, ಪುಳಕಗೊಳಿಸುವ, ಎಂತೆಂಥಾದ್ದೋ ಸಾಹಸಗಳಿಗೆ ಒಡ್ಡಿಕೊಳ್ಳುವಂತೆ ಮಾಡುವ ಕನಸೆಂಬ ಮಾಯಾವಿ ಈ ಹಾಡಿನ ಹಿಂದಿರುವ ಮುಖ್ಯ ಮಾಯೆ. ಆ ಕ್ಷಣಕ್ಕೆ ವಾಸ್ತವಿಕ ಪರಿಧಿಯಾಚೆ ಕೊಂಡೊಯ್ಯುವ, ಅಸಾಧ್ಯವಾದುದನ್ನೂ ಕೂಡಾ ಸಾಧ್ಯವಾಗುವಂತೆ ಮಾಡುವ ಶಕ್ತಿ ಕನಸಿಗಿದೆ. ನಾವು ಸವಾಲು ಅಂತ ಬಂದಾಗ ಕಳೆದುಕೊಳ್ಳುವ ಭಯದಿಂದ ಹಿಂದಡಿ ಇಡೋದಿದೆ.
ಈ ಹಾಡಿಗೆ ಮತ್ತಷ್ಟು ಮೆರಗು ತಂದುಕೊಟ್ಟಿರುವುದು ಮಾಧುರಿ ಶೇಷಾದ್ರಿ. ಇವರ ಕಂಠಸಿರಿಯಲ್ಲಿ ನಶೆಯೋ ನಕಾಶೆಯೋ ಹಾಡು ಮೂಡಿ ಬಂದಿದೆ. ರಾಮ್ ಕುಮಾರ್ ನೃತ್ಯ ನಿರ್ದೇಶನದೊಂದಿಗೆ ಕಳೆಗಟ್ಟಿಕೊಂಡಿದೆ. ಇದರ ಮೂಲಕವೇ ಶೃತಿ ಹರಿಹರನ್ ಪಾತ್ರದ ಝಲಕ್ ಕೂಡಾ ಜಾಹೀರಾಗಿದೆ.
ಸಾರಾಂಶ ಚಿತ್ರದಲ್ಲಿ ದೀಪಕ್ ಸುಬ್ರಮಣ್ಯ, ಸೂರ್ಯ ವಸಿಷ್ಠ, ಶೃತಿ ಹರಿಹರನ್, ಶ್ವೇತಾ ಗುಪ್ತ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪ್ರೊಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ.