ಬೆಂಗಳೂರು; ಶಾಸಕ ಎಸ್.ಟಿ.ಸೋಮಶೇಖರ್ ಬಿಜೆಪಿಯಲ್ಲಿಯೇ ಇದ್ದರು ಕೂಡ ಹೆಚ್ಚಾಗಿ ಕಾಂಗ್ರೆಸ್ ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನವರ ಪರವಾಗಿ ಮಾತನಾಡುವುದು ಸರ್ವೇ ಸಾಮಾನ್ಯವಾಗಿದೆ. ಕಾಂಗ್ರೆಸ್ ಪಕ್ಷದ ಜೊತೆಗೆ ಗುರುತಿಸಿಕೊಳ್ಳುತ್ತಾರೆ. ಹೀಗಾಗಿ ಈಗ ಈ ವಿಚಾರವೆಲ್ಲಾ ಬಿಜೆಪಿ ಹೈಕಮಾಂಡ್ ಪಾಳಯ ತಲುಪಿದೆ. ತಮ್ಮ ಪಕ್ಷದ ವಿರುದ್ಧ ನೇರ ವಾಗ್ದಾಳಿ ನಡೆಸುತ್ತಿರುವುದು ಬಿಜೆಪಿಗೆ ಮುಜುಗರ ತಂದೊಡ್ಡಿದೆ. ಈ ಬಗ್ಗೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಇಂದು ಬಿಜೆಪಿ – ಜೆಡಿಎಸ್ ಪಕ್ಷಗಳ ಪ್ರತಿಭಟನೆ ನಡೆದಿದೆ. ಈ ವೇಳೆ ಮಾತನಾಡಿದ ಬಿವೈ ವಿಜಯೇಂದ್ರ ಅವರು, ಶಾಸಕ ಸೋಮಶೇಖರ್ ಅವರು ಯಾಕೆ ಸರ್ಕಾರದ ಪರವಾಗಿ ಹೇಳಿಕೆ ಕೊಡುತ್ತಿದ್ದಾರೆ ಎಂಬುದು ನಿಮಗೂ ಗೊತ್ತಿದೆ. ರಾಜ್ಯ ಬಿಜೆಪಿ ತೀರ್ಮಾನ ಕೈಗೊಂಡು ಕೇಂದ್ರದ ವರಿಷ್ಠರಿಗೆ ಕಳುಹಿಸಲಾಗಿದೆ. ಈ ಸಂಬಂಧ ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ವಿಧಾನಸಭಾ ಕ್ಷೇತ್ರ, ಜಿಲ್ಲೆ, ರಾಜ್ಯಕ್ಕೆ ಒಬ್ಬೊಬ್ಬರಂತೆ ನೇಮಿಸಿದ್ದಾರೆ. ರಾಜ್ಯ ಅಧ್ಯಕ್ಷರಿಗೆ ಲಕ್ಷಾಂತರ ವೇತನ, ಕ್ಯಾಬಿನೆಟ್ ದರ್ಜೆ ನೀಡಿದ್ದು ಖಂಡನೀಯ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನೇತೃತ್ವದ ಸರ್ಕಾರವು ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನ ರಚಿಸಿ ರಾಜ್ಯದ ಜನರ ತೆರಿಗೆ ಹಣವನ್ನ ಈ ಸಮಿತಿಗೆ ಸಂಬಳವಾಗಿ ನೀಡುತ್ತಿರುವುದು ನಾಚಿಗೇಡಿನ ಸಂಗತಿಯಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರ ಗೌರವಧನ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಬಿಸಿಯೂಟ ಅಡುಗೆ ಮಾಡುವವರ, ದಾದಿಯರು, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ. ಇದನ್ನು ನಿನ್ನೆ ಬಿಜೆಪಿ, ಜೆಡಿಎಸ್ ಸದಸ್ಯರು ಸದನದಲ್ಲಿ ಪ್ರಸ್ತಾಪಿಸಿದ್ದು, ಮಾನ್ಯ ರಾಜ್ಯಪಾಲರನ್ನೂ ಭೇಟಿ ಮಾಡಲಿದ್ದೇವೆ ಎಂದಿದ್ದಾರೆ. ಇದೇ ವೇಳೆ ಗ್ಯಾರಂಟಿ ಯೋಜನೆಗೆ ಜಿಲ್ಲಾಧಿಕಾರಿ, ತಹಶಿಲ್ದಾರ್ ಇಲ್ಲವೇ..? ಕಾರ್ಯಕರ್ತರನ್ನ ಬಳಸಿಕೊಳ್ಳಬೇಕೆ ಎಂದು ಪ್ರಶ್ನೆ ಮಾಡಿದ್ದಾರೆ.

