ಚಿತ್ರದುರ್ಗ, (ಮಾ.02) : ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ, ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ವತಿಯಿಂದ ಇಲ್ಲಿನ ಒನಕೆ ಓಬವ್ವ ವೃತ್ತದಲ್ಲಿ ಬುಧವಾರ ವಿಶ್ವಶಾಂತಿಗಾಗಿ ಮೇಣದಬತ್ತಿಯನ್ನು ಮೊಳಗಿಸಿ ಪ್ರಾರ್ಥಿಸಲಾಯಿತು.
ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ರಾಜ್ಯಾಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡಿ ರಷ್ಯಾ-ಯುಕ್ರೇನ್ ನಡುವೆ ನಡೆಯುತ್ತಿರುವ ಯುದ್ದ ಹಿಂಸೆಗೆ ತಿರುಗಿದ್ದು ಕೂಡಲೆ ನಿಲ್ಲಬೇಕು. ಅದಕ್ಕಾಗಿ ವಿಶ್ವಸಂಸ್ಥೆ ಮುಂದಾಳತ್ವ ವಹಿಸಿ ಯುದ್ದ ತಡೆಯಬೇಕು. ಈಗಾಗಲೆ ಅಲ್ಲಿ ಶೆಲ್ ದಾಳಿ ನಡೆಯುತ್ತಿದ್ದು, ಸಾವಿರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಯುದ್ದದಿಂದ ಯಾವುದೇ ಲಾಭವಿಲ್ಲ. ಅದಕ್ಕೆ ಬದಲಾಗಿ ಶಾಂತಿ ನೆಲೆಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡಿ ಸಣ್ಣ ದೇಶ ಯುಕ್ರೇನ್ ಮೇಲೆ ರಷ್ಯಾ ಯುದ್ದ ಸಾರುತ್ತಿರುವುದು ಮಾನವೀಯತೆಯಲ್ಲ. ಯುದ್ದದಿಂದ ಅನೇಕ ಮಹಿಳೆ ಮಕ್ಕಳು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ.
ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್‍ಗೆ ಹೋಗಿದ್ದ ನಮ್ಮ ರಾಜ್ಯದ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿರುವುದು ದುರಂತ. ಹಾಗಾಗಿ ಕೂಡಲೆ ಯುದ್ದ ನಿಲ್ಲಬೇಕು ಎಂದರು.
ದಲಿತ ಮುಖಂಡ ರಾಜಣ್ಣ ಮಾತನಾಡುತ್ತ ನಮ್ಮ ರಾಜ್ಯ ಮತ್ತು ದೇಶದಲ್ಲಿ ವೈದ್ಯಕೀಯ ಶಿಕ್ಷಣ ಕೈಗೆಟುಕದೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದುಬಾರಿಯಾಗಿರುವುದರಿಂದ ಉಕ್ರೇನ್‍ನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಹೋಗಿದ್ದಾರೆ. ಅಲ್ಲಿ ನಮ್ಮ ರಾಜ್ಯದ ವಿದ್ಯಾರ್ಥಿ ಬಲಿಯಾಗಿರುವುದು ನೋವಿನ ಸಂಗತಿ. ಯುದ್ದ ನಮಗೆ ಬೇಕಾಗಿಲ್ಲ. ಶಾಂತಿ ಬೇಕು. ಇದಕ್ಕೆ ವಿಶ್ವಸಂಸ್ಥೆ ಮುಂದಾಗಬೇಕೆಂದು ಆಗ್ರಹಿಸಿದರು.
ಎಸ್.ಡಿ.ಪಿ.ಐ.ತಾಲ್ಲೂಕು ಅಧ್ಯಕ್ಷ ಜಾಕೀರ್ ಹುಸೇನ್ ಮಾತನಾಡಿ ಜಗತ್ತಿನಲ್ಲಿ ಎಲ್ಲರೂ ಸಮಾನರೆ ಯಾರ ಮೇಲೂ ಯಾರು ಯುದ್ದ ಮಾಡಬಾರದು. ಇದರಿಂದ ಸಾಕಷ್ಟು ಪ್ರಾಣಹಾನಿಯಾಗುವುದನ್ನು ಬಿಟ್ಟರೆ ಯಾವ ಪ್ರಯೋಜನವೂ ಇಲ್ಲ. ಅದಕ್ಕಾಗಿ ಶಾಂತಿಯ ಸಂದೇಶವನ್ನು ರಷ್ಯಾ-ಉಕ್ರೇನ್‍ಗೆ ಕಳಿಸಬೇಕಿದೆ ಎಂದು ಹೇಳಿದರು.
ಯುವ ವಕೀಲ ಅಶೋಕ್‍ಬೆಳಗಟ್ಟ ಮಾತನಾಡಿ ಉಕ್ರೇನ್ ಸಣ್ಣ ದೇಶ. ಆದರೆ ಅಲ್ಲಿ ವೈದ್ಯಕೀಯ ಶಿಕ್ಷಣ ಸುಲಭವಾಗಿ ಕೈಗೆಟುಕುವುದರಿಂದ ಭಾರತದಿಂದ ಅನೇಕ ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲಿ ಭೀಕರವಾಗಿ ಯುದ್ದವಾಗುತ್ತಿರುವುದರಿಂದ ಹಿಂಸೆ ತಾಂಡವವಾಡುತ್ತಿದೆ. ಜಗತ್ತಿನ ಎಲ್ಲಾ ಪ್ರಭಲ ರಾಷ್ಟ್ರಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಯುದ್ದವನ್ನು ನಿಲ್ಲಿಸಬೇಕಿದೆ ಎಂದರು.
ನ್ಯಾಯವಾದಿ ಮಲ್ಲೇಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಹೆಚ್.ಲಕ್ಷ್ಮಣ್, ಕಾಮ್ರಾನ್, ಹತಾವುಲ್ಲಾ, ಅರ್ಫಾನ್‍ಅಲಿ, ಹನೀಫ್, ದಲಿತ ಮುಖಂಡ ರಾಜಣ್ಣ, ಉಪನ್ಯಾಸಕ ಕಾಂತರಾಜ್, ಎಸ್.ಡಿ.ಪಿ.ಐ. ಪಿ.ಎಫ್.ಐ.ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.