ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 18 : ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ತಡೆಗಟ್ಟುವಂತೆ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ
ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ರೈತರು ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಸ್ವಂತ ವೆಚ್ಚ ಭರಿಸುವಂತೆ ಸರ್ಕಾರ ತೀರ್ಮಾನಿಸಿರುವುದು ರೈತರಿಗೆ ಹೊರೆಯಾಗುತ್ತದೆ. ಎರಡರಿಂದ ಮೂರು ಲಕ್ಷ ರೂ.ವೆಚ್ಚ ಭರಿಸುವುದು ರೈತರಿಂದ ಅಸಾಧ್ಯ. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದು ಹಳೆ ಪದ್ದತಿಯನ್ನು ಮುಂದುವರೆಸಬೇಕೆಂದು ಪ್ರತಿಭಟನಾನಿರತ ರೈತರು ಒತ್ತಾಯಿಸಿದರು.
ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಆಧಾರ್ ಲಿಂಕ್ ಮಾಡುವ ಉದ್ದೇಶವೇನು ಎನ್ನುವುದನ್ನು ಸರ್ಕಾರ ತಿಳಿಸಬೇಕು. ಭೂ ಸುಧಾರಣಾ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯಿದೆಯನ್ನು ಕೂಡಲೆ ಹಿಂದಕ್ಕೆ ಪಡೆಯಬೇಕು. ರೈತರು ಜಮೀನುಗಳಿಗೆ ಓಡಾಡಲು ನಕಾಶೆಯಿಲ್ಲದಿರುವುದು ಅನೇಕ ಹಳ್ಳಿಗಳಲ್ಲಿ ಜಮೀನಿಗೆ ಹೋಗಲು ತೊಂದರೆಯಾಗುತ್ತಿದೆ.
ಜಿಲ್ಲಾಧಿಕಾರಿಗಳು ತಹಶೀಲ್ದಾರ್‍ಗೆ ಸೂಚನೆ ನೀಡಿ ಸಮಸ್ಯೆ ಬಗೆಹರಿಸಬೇಕು.
ಕಳೆದ ವರ್ಷ ಏಪ್ರಿಲ್‍ನಿಂದ ಇದುವರೆವಿಗೂ 1182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರ ರೈತ ಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಬೇಕು.
ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಕೃಷಿ ಬೆಲೆ ಆಯೋಗವನ್ನು ಸಬಲೀಕರಣಗೊಳಿಸಬೇಕು. ಕೃಷಿ ಉತ್ಪನ್ನಗಳಿಗೆ ರಾಜ್ಯ ಸರ್ಕಾರವೇ ಎಂ.ಎಸ್.ಪಿ. ನಿಗದಿಪಡಿಸಿ ಖರೀಧಿಸಬೇಕು.
ಹಿಂದೆಂದೂ ಕಂಡರಿಯದಂತ ಬರಗಾಲವನ್ನು ಎದುರಿಸುತ್ತಿರುವ ರೈತರ ಸಾಲ ಬಾಕಿ ಪಾವತಿಸುವಂತೆ ಬ್ಯಾಂಕ್‍ಗಳು ಕಿರುಕುಳ ನೀಡುತ್ತಿರುವುದು ನಿಲ್ಲಬೇಕು.
ರೈತರ ಎಲ್ಲಾ ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ವಿಸ್ತರಿಸಿ ಗ್ರಾಮ ಮಟ್ಟದಲ್ಲಿ ಬೆಳೆಹಾನಿ ನಿರ್ಧರಿಸಿ ವಿಮಾ ಕಂಪನಿಗಳು ಉಳಿಸಿಕೊಂಡಿರುವ ಬಾಕಿಯನ್ನು ರೈತರ ಖಾತೆಗಳಿಗೆ ತಕ್ಷಣವೇ ಜಮಾ ಮಾಡಬೇಕು.
ಫಸಲು ಪಹಣಿ, ದುರಸ್ಥಿ ಪಕ್ಕಾಪೋಡು, ಹದ್ದುಬಸ್ತು ಶುಲ್ಕ ದುಬಾರಿಯಾಗಿರುವುದನ್ನು ಇಳಿಸಬೇಕು.
ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆಯವರು ನೀಡುತ್ತಿರುವ ಕಿರುಕುಳ ತಪ್ಪಿಸಿ ಸಾಗುವಳಿ ಮಾಡುತ್ತಿರುವ ಎಲ್ಲಾ ರೈತರಿಗೂ ಪಹಣಿ ಪಟ್ಟ ನೀಡಬೇಕೆಂದು ರೈತರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಜಿಲ್ಲಾ ಕಾರ್ಯಾಧ್ಯಕ್ಷ ಹೊರಕೇರಪ್ಪ, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ತಾಲ್ಲೂಕು ಅಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ, ನಾಗರಾಜ್ ಮುದ್ದಾಪುರ, ಎ.ತಿಪ್ಪೇಸ್ವಾಮಿ, ಚೇತನ ಯಳನಾಡು, ಕರಿಬಸವಣ್ಣ, ಕುಮಾರಸ್ವಾಮಿ,
ಕೋಗುಂಡೆ ರವಿ, ಏಕಾಂತಪ್ಪ, ಪ್ರಭು, ಬಿ.ಓ.ಶಿವಕುಮಾರ್, ವಿ.ನಾಗೇಂದ್ರಪ್ಪ, ಸರ್ವೋದಯ ಕರ್ನಾಟಕ ಪಾರ್ಟಿ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.