ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.26 : ದೇಶದ ಪ್ರಗತಿಗೆ ಪ್ರತಿ ಮನೆಯಲ್ಲಿ ಸ್ಕೌಟ್ ಅಂಡ್ ಗೈಡ್ ಮಕ್ಕಳಿರಬೇಕೆಂದು ರಾಷ್ಟ್ರಪಿತ ಮಹಾತ್ಮಗಾಂಧಿ ಹೇಳಿದ್ದರು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಸ್ಮರಿಸಿದರು.
ಕಾಲೇಜು ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ವತಿಯಿಂದ ಎಸ್.ಆರ್.ಎಸ್.ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ರೋವರ್ಸ್ ಸ್ಕೌಟ್ ಲೀಡರ್ಸ್ ಮತ್ತು ರೇಂಜರ್ಸ್ ಲೀಡರ್ಸ್‍ಗಳಿಗೆ ಮಂಗಳವಾರ ಏರ್ಪಡಿಸಲಾಗಿದ್ದ ಒಂದು ದಿನದ ಪ್ರಾರಂಭಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರ ನಡೆಸುವುದು ಕಷ್ಟದ ಕೆಲಸ. ಬಿ.ಎ.ಲಿಂಗಾರೆಡ್ಡಿರವರು ಎಸ್.ಆರ್.ಎಸ್.ಶಿಕ್ಷಣ ಸಂಸ್ಥೆ ಮುನ್ನಡೆಸುತ್ತಿದ್ದಾರೆಂದರೆ ಸುಲಭದ ಕೆಲಸವಲ್ಲ ಹೊಸ ಹೊಸ ಆವಿಷ್ಕಾರಗಳನ್ನು ಅರಿತು ಸಾಗಬೇಕೆಂದು ಶ್ಲಾಘಿಸಿದರು.
ಎಲ್.ಕೆ.ಜಿ. ಯು.ಕೆ.ಜಿ.ಯಿಂದ ಹಿಡಿದು ಸ್ನಾತಕೋತ್ತರದವರೆಗೆ ರಾಜ್ಯದಲ್ಲಿ ಎರಡು ಕೋಟಿ ಮಕ್ಕಳಿದ್ದಾರೆ. ಎನ್.ಸಿ.ಸಿ. ಎನ್.ಎಸ್.ಎಸ್. ರೆಡ್‍ಕ್ರಾಸ್, ಇದೆ. ನಾವು ಯಾರಿಗೂ ಸ್ಪರ್ಧೆ ಮಾಡುತ್ತಿಲ್ಲ. ಸ್ಕೌಟ್, ಎನ್.ಸಿ.ಸಿ. ಶಿಸ್ತು ರೆಡ್‍ಕ್ರಾಸ್‍ನ ಉದಾತ್ತ ಧ್ಯೇಯಗಳನ್ನು ಮಕ್ಕಳಿಗೆ ತಲುಪಿಸಲು ಎಷ್ಟು ವರ್ಷಗಳು ಬೇಕು ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ? ಸ್ಕೌಟ್ ಅಂಡ್ ಗೈಡ್ಸ್ ಹೊರ ದೇಶದಿಂದ ಬಂದಿದ್ದಲ್ಲ. ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಎಸ್.ನಿಜಲಿಂಗಪ್ಪ, ಹೋ.ಚಿ.ಬೋರಯ್ಯ, ಚನ್ನಯ್ಯ ಒಡೆಯರ್, ಸ್ಕೌಟ್‍ನಲ್ಲಿದ್ದರು. ಕೊಂಡಜ್ಜಿ ಬಸಪ್ಪ ಸ್ಕೌಟ್ ಅಂಡ್ ಗೈಡ್ಸ್‍ನಲ್ಲಿ ಭೀಷ್ಮ ಪಿತಾಮಹ ಎಂದು ನೆನಪಿಸಿಕೊಂಡರು.
ಹೊಸ ಶಿಕ್ಷಣ ನೀತಿಯಲ್ಲಿ ಸ್ಕೌಟ್ ಅಂಡ್ ಗೈಡನ್ನು ಪಠ್ಯದಲ್ಲಿ ಸೇರಿಸಿದ್ದಾರೆ. ಮೊದಲು ಶಿಕ್ಷಕರು ತರಬೇತಿ ಪಡೆದುಕೊಂಡು ಮಕ್ಕಳಿಗೆ ತಿಳಿಸಿದಾಗ ಸ್ಕೌಟ್ ಗೈಡ್‍ಗಳಾಗಬಹುದು. ಕೊಂಡಜ್ಜಿ ಬಸಪ್ಪ, ದೀನದಯಾಳ್ ನಾಯ್ಡು ಇವರುಗಳು ಕೆಲಸ ಮಾಡಿರುವ ಈ ಸಂಸ್ಥೆಯಲ್ಲಿ ನನಗೆ ಭಗವಂತ ಕೊಟ್ಟಿರುವ ಅವಕಾಶ ಎಂದು ತಿಳಿದು ಸೇವೆ ಮಾಡುತ್ತಿದ್ದೇನೆ. ಅಂಗನವಾಡಿ ಶಿಕ್ಷಕರುಗಳಿಗೆ ಬನ್ನಿ ತರಬೇತಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆದೇಶಿಸಿದೆ.
ಕೊಂಡಜ್ಜಿಯಲ್ಲಿ ನೂರು ಎಕರೆ ಪ್ರದೇಶದಲ್ಲಿ ತರಬೇತಿ ಶಿಬಿರವಿದೆ. ನೀವುಗಳು ಅಲ್ಲಿ ಏಳು ದಿನದ ತರಬೇತಿ ಪಡೆದುಕೊಳ್ಳಿ ಎಂದು ರೋವರ್ಸ್ ಸ್ಕೌಟ್ ಲೀಡರ್ಸ್ ಮತ್ತು ರೇಂಜರ್ಸ್ ಲೀಡರ್ಸ್‍ಗಳಿಗೆ ಪಿ.ಜಿ.ಆರ್.ಸಿಂಧ್ಯಾ ಸೂಚಿಸಿದರು.
ಬದುಕಿನ ಕಲೆಯನ್ನು ಮಕ್ಕಳಿಗೆ ತಿಳಿಸುವುದೇ ಸ್ಕೌಟ್ ಅಂಡ್ ಗೈಡ್ಸ್. ರೋವರ್ಸ್ ರೇಂಜರ್ಸ್‍ಗಳನ್ನು ಬಲಪಡಿಸೋಣ. ಅನೇಕ ಮಹನೀಯರು ಶಾಲಾ ದಿನಗಳಲ್ಲಿ ಸ್ಕೌಟ್ ಗೈಡ್ಸ್‍ನಲ್ಲಿದ್ದವರು. ವ್ಯಕ್ತಿತ್ವ ನಿರ್ಮಿಸಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ರೋವರ್ಸ್ ರೇಂಜರ್ಸ್ ಲೀಡರ್‍ಗಳಾಗಿ ಕೋವಿಡ್ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳು ಒಂದು ಕೋಟಿ ಮಾಸ್ಕ್ ಗಳನ್ನು ಸಂಗ್ರಹಿಸಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಮಕ್ಕಳಿಗೆ ನೀಡಿದ್ದಾರೆ. ಸೇವಾ ಮನೋಭಾವ, ದೇಶಭಕ್ತಿ ಮೂಡಿಸುವುದು ಸಂಸ್ಥೆಯ ಉದ್ದೇಶ. ಪ್ರಪಂಚದಲ್ಲಿ ಸ್ಕೌಟ್ ಗೈಡ್‍ನ ಸಂಖ್ಯೆ ಜಾಸ್ತಿಯಾಗಬೇಕು. ರಾಜ್ಯದಲ್ಲಿ ಹತ್ತು ಲಕ್ಷ ತಲುಪುವ ಗುರಿಯಿಟ್ಟುಕೊಂಡಿದ್ದೇವೆ. ಹೊಸ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ಆಗಲ್ಲ. ಉತ್ತಮ ಅಂಶಗಳಿರುವುದನ್ನು ಅಳವಡಿಸಿಕೊಳ್ಳೋಣ. ಸ್ಕೌಟ್ ಅಂಡ್ ಗೈಡ್‍ನಲ್ಲಿ ಯೂನಿಟ್‍ಗಳನ್ನು ಪ್ರಾರಂಭ ಮಾಡಿ ಎಂದು ಹೇಳಿದರು.
ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ ಮಾತನಾಡಿ ತಾಲ್ಲೂಕು ಮಟ್ಟದಲ್ಲಿ ಗೀತ ಗಾಯನ ಕಾರ್ಯಕ್ರಮ ನಡೆಸಿದ್ದೇವೆ. ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನವೆಂಬರ್ ಅಥವಾ ಡಿಸೆಂಬರ್‍ನಲ್ಲಿ ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಗೀತ ಗಾಯನ ಸ್ಪರ್ಧೆ ನಡೆಸುವುದಾಗಿ ತಿಳಿಸಿದರು.
ಸ್ಕೌಟ್ ಅಂಡ್ ಗೈಡ್ಸ್ ಹೆಚ್.ಕ್ಯೂ.ಸಿ. ಜಿ.ಎಸ್.ಉಜ್ಜಿನಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಯಸ್ಕ ಸಂಪನ್ಮೂಲ ಆಯುಕ್ತ ಚಿನ್ನಸ್ವಾಮಿರೆಡ್ಡಿ, ರಾಜ್ಯ ಗೈಡ್ ಆಯುಕ್ತೆ ಗೀತ ನಟರಾಜ್, ರೇಂಜರ್ ಲೀಡರ್ ಜ್ಯೋತಿ, ರೋವರ್ ಸ್ಕೌಟ್ ಲೀಡರ್ ರಾಜೇಶ್ ಅವಲಕ್ಕಿ, ಎ.ಡಿ.ಸಿ. ಪ್ರಶಾಂತ್, ಹೆಚ್.ಕ್ಯೂ.ಸಿ. ಸತ್ಯನಾರಾಯಣನಾಯ್ಡು, ಖಜಾಂಚಿ ಎ.ಬಿ.ಸಿ. ಅನ್ವರ್, ಸಹ ಕಾರ್ಯದರ್ಶಿ ಡಾ.ರಹಮತ್‍ವುಲ್ಲಾ, ಸ್ಕೌಟ್ ಆಯುಕ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ನೋಡಲ್ ಅಧಿಕಾರಿ ಹೆಚ್.ಟಿ.ಎಸ್.ತಿಪ್ಪೇಸ್ವಾಮಿ, ಪರಮೇಶ್, ಗದಗಿನ ಪೂಜಾರ್ ವೇದಿಕೆಯಲ್ಲಿದ್ದರು. ಶಿಕ್ಷಕರುಗಳಾದ ಸಿ.ರವಿ, ಎಂ.ವಿಶ್ವನಾಥ್, ತಿಪ್ಪೇಸ್ವಾಮಿ, ಚಮನ್‍ಬೀ, ಶೇಖರ್‍ನಾಯ್ಕ, ವಿನಯ್, ನೂರ್‍ಫಾತಿಮ, ಬಷೀರ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.