ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಈ ಯಾತ್ರೆಯಲ್ಲಿ ಭದ್ರತೆಯ ಲೋಪ ಮಾಡಿದ್ದಾರೆ ಎಂದು ಭದ್ರತಾ ಪಡೆ ದೂರಿದೆ. ಈ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ, ನಾನು ಭದ್ರತೆಯಲ್ಲಿ ಲೋಪ ಮಾಡಿದ್ದೇನೆ, ಪ್ರೋಟೋಕಾಲ್ ಮೀರಿದ್ದೇನೆ ಎಂದು ಭದ್ರತಾ ಪಡೆಗಳಿಂದ ಬಿಜೆಪಿ ಹೇಳಿಕೆ ನೀಡುತ್ತಿದೆ. ವಿನಾ ಕಾರಣ ನನ್ನ ಮೇಲೆ ಗೂಬೆ ಕೂರಿಸಿ, ದೂರು ದಾಖಲಿಸುತ್ತಿದೆ. ನೀವೂ ಬುಲೆಟ್ ಪ್ರೂಫ್ ವಾಹನದಲ್ಲಿ ಹೋಗಿ ಎಂದು ಗೃಹ ಸಚಿವಾಲಯದ ಹೇಳುತ್ತದೆ. ನಾನು ಅದನ್ನು ಹೇಗೆ ಮಾಡುವುದು. ಯಾತ್ರೆಯಲ್ಲಿ ಕಾಲ್ನಡಿಗೆಯಲ್ಲಿಯೇ ಸಾಗಬೇಕು. ನನ್ನ ಭದ್ರತೆಗಾಗಿ ಏನು ಮಾಡಬೇಕು ಎಂಬುದು ಅವರಿಗೆ ಗೊತ್ತಿದೆ.
ಬಿಜೆಪಿ ವಿರುದ್ಧ ದೇಶದೊಳಗೆ ಮೌನ ಅಲೆ ಇದೆ. ಪ್ರತಿಪಕ್ಷದ ನಾಯಕರು ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಜೊತೆಗೆ ಇದ್ದಾರೆ. ಇದು ನಮಗೆ ಯಶಸ್ವಿ ಯಾತ್ರೆಯಾಗಿದೆ. ನಿರುದ್ಯೋಗ ಮತ್ತು ಬೆಲೆ ಏರಿಕೆಯ ಸಮಸ್ಯೆಗಳು ದೇಶದಲ್ಲಿ ವ್ಯಾಪಕವಾಗಿದೆ. ಈ ಕುರಿತ ಅರಿವನ್ನು ಭಾರತ್ ಜೋಡೋ ಯಾತ್ರೆ ಮೂಡಿಸುತ್ತಿದೆ.
ಬಿಜೆಪಿ ಬಹಳಷ್ಟು ಪ್ರಚಾರಗಳನ್ನು ಮಾಡುತ್ತದೆ. ಆದರೆ ಸತ್ಯದ ವಿರುದ್ಧ ಹೋರಾಡುವುದಕ್ಕೆ ಅದರಿಂದ ಸಾಧ್ಯವಿಲ್ಲ. ಅವರ ಬಳಿ ಸಾಕಷ್ಟು ಹಣವಿದೆ. ಅವರು ಏನು ಮಾಡಿದರು ಸತ್ಯದೊಂದಿಗೆ ಹೋರಾಡುವುದಕ್ಕೆ ಸಾಧ್ಯವಿಲ್ಲ. ಆರ್ ಎಸ್ ಎಸ್ ಮತ್ತು ಬಿಜೆಪಿ ಮಾಡುವ ಟೀಕೆಗಳಿಗಾಗಿ ನಾನು ಧನ್ಯವಾದ ತಿಳಿಸುತ್ತೇನೆ. ಅವರು ನಮ್ಮ ಗುರುಗಳಿದ್ದಂತೆ. ಯಾಕಂದ್ರೆ ನಮ್ಮನ್ನು ಬಲಪಡಿಸಲು ಸಹಾಯ ಮಾಡುತ್ತಿದೆ ಎಂದಿದ್ದಾರೆ.