ಬೆಂಗಳೂರು; ಮಕ್ಕಳೆಂದರೆ ಯಾವ ಪೋಷಕರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಕ್ಕಳಾದ ಮೇಲೆ ಅವರ ಉಜ್ವಲ ಭವಿಷ್ಯಕ್ಕಾಗಿಯೇ ಹೋರಾಡುತ್ತಾರೆ. ಅವರ ಬಗ್ಗೆ ಹೆಚ್ಚಿನ ಕಾಳಜಿಯನ್ನ ತೋರುತ್ತಾರೆ. ಅನಾರೋಗ್ಯ ಕಾಡಿದರಂತು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ. ವಾಸಿಯಾಗುವ ಕಾಯಿಲೆಯಾದರೆ ಸರಿ. ಆದರೆ ಕಾಯಿಲೆ ವಾಸಿಯಾಗೋದಕ್ಕೆ ಒಂದಲ್ಲ ಎರಡಲ್ಲ ಕೋಟಿ ಕೋಟಿ ರೂಪಾಯಿ ಬೇಕಾಗಬಹುದು ಎಂದಾಗ ಆ ಹೆತ್ತ ಪೋಷಕರ ಪರಿಸ್ಥಿತಿ ಏನಾಗಬಹುದು ನೀವೆ ಹೇಳಿ. ಜೀವನವನ್ನೇ ಬರುವ ಸಂಬಳದಲ್ಲಿ ನಡೆಸುವ ಪೋಷಕರಿಗೆ ಅತಿ ದುಬಾರಿಯಾದ ಕಾಯಿಲೆ ಎದುರಾದರೆ ದೇವರ ಮೇಲೆ ಭಾರ ಹಾಕಿ ಕೂರಬೇಕಾಗುತ್ತದೆ.

ಇಲ್ಲೊಂದು ಅಂಥದ್ದೇ ಘಟನೆ ಬೆಳಕಿಗೆ ಬಂದಿದೆ. ಕೇವಲ ಒಂದೂವರೆ ವರ್ಷದ ಮಗುವಿಗೆ ಬಹಳ ಅಪರೂಪದ ಕಾಯಿಲೆಯೊಂದು ಕಾಣಿಸಿಕೊಂಡಿದೆ. ಕೀರ್ತನಾ ಎಂಬ ಪುಟ್ಟ ಮಗುವಿಗೆ ಅಪರೂಪದ ಜೆನೆಟಿಕಲ್ ಡಿಸಾರ್ಡರ್ ಕಾಯಿಲೆ ಕಾಣಿಸಿಕೊಂಡಿದೆ. ಇದರಿಂದ ಮಗುವಿನ ಚಿಕಿತ್ಸೆಯೇ ದುಬಾರಿಯಾಗಿದೆ.

ಕೀರ್ತನಾ ತಂದೆ ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡ್ತಾ ಇದಾರೆ. ಕಿಶೋರ್ ಎಂಬುವವರ ಪುತ್ರಿ ಕೀರ್ತನಾ. ಕಿಶೋರ್ ಈಗಾಗಲೇ ತಮ್ಮಿಡಿ ಆಸ್ತಿಯನ್ನ ಮಾರಿ ಮಗುವಿಗೆ ಟ್ರೀಟ್ಮೆಂಟ್ ಕೊಡಿಸಿದ್ದಾರೆ. 16 ಕೋಟಿ ಮೊತ್ತದ ಆ ಒಂದು ಮೆಡಿಸನ್ ಕೊಡಿಸಿದರೆ ಮಗು ಗುಣಮುಖರಾಗುವ ಎಲ್ಲಾ ಸಾಧ್ಯತೆ ಇದೆ. ಹೀಗಾಗಿ ಆ ಮಗುವಿನ ಪರವಾಗಿ ಕಿಚ್ಚ ಸುದೀಪ್ ಕೂಡ ನಿಂತಿದ್ದಾರೆ. ವಿಡಿಯೋ ಮಾಡಿ, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್ ತನ್ನ ಕೈಲಾದ ಸಹಾಯವನ್ನ ನಾನು ಮಾಡಿದ್ದೀನಿ. ನೀವೂ ಕೂಡ ನಿಮ್ಮ ಕೈಲಾದ ಸಹಾಯವನ್ನು ಮಾಡಿ ಎಂದು ಕೇಳಿಕೊಂಡಿದ್ದಾರೆ.

