ದಾವಣಗೆರೆಯಲ್ಲಿ ಮತದಾರರಿಗೆ ಹಂಚಲು ದಾಸ್ತಾನು ಮಾಡಿದ್ದ ರೂ.16.65 ಲಕ್ಷ ಗೃಹಬಳಕೆ ವಸ್ತುಗಳ ವಶ

1 Min Read

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಾವಣಗೆರೆ

ದಾವಣಗೆರೆ.(ಮಾ.20): ದಾವಣಗೆರೆ ದಕ್ಷಿಣ ವಿಭಾಗದ 107 ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರಿಗೆ ಹಂಚಲು ಅಕ್ರಮವಾಗಿ ದಾಸ್ತಾನುಮಾಡಿದ್ದ ರೂ.16,65,630ಗಳ ಮೌಲ್ಯದ ಗೃಹಬಳಕೆ ವಸ್ತುಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಲಾಗಿದೆ.

ಮಾರ್ಚ್ 19ರ ಸಂಜೆ ದಾವಣಗೆರೆ ಶಹರದ ಗಾಂಧಿನಗರ ಪೊಲೀಸ್ ಠಾಣೆ ಸರಹದ್ದಿನ ನಾಲಾಬಂದ್ ರಸ್ತೆಯಲ್ಲಿನ ಮಾಲತೇಶ ಜಾಧವ್ ಎಂಬುವವರಿಗೆ  ಸೇರಿದ ಸೆಡ್‍ನಲ್ಲಿ ಅಂದಾಜು  ರೂ.16,65,630, ಮೌಲ್ಯದ 597 ರಟ್ಟಿನ ಬಾಕ್ಸ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರತಿ ರಟ್ಟಿನ ಬಾಕ್ಸ್‍ನ ಮೇಲೆ 2790 ರೂ ಎಂದು ನಮೂದಿಸಲಾಗಿದ್ದು, ಎಲ್ಲಬಾಕ್ಸ್ ಗಳ ಮೇಲೆ ಎಸ್.ಎಸ್.& ಎಸ್.ಎಸ್.ಎಂ. ಅಭಿಮಾನ ಬಳಗ, ಹಸ್ತದ ಗುರುತು ಇರುವ ಹಾಗೂ ಹಾಲಿ ಶಾಸಕರಾದ ಶ್ಯಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಶಾಸಕರಾದ ಎಸ್.ಎಸ್.ಮಲ್ಲಿಕಾರ್ಜುನಪ್ಪ
ಅವರ ಭಾವಚಿತ್ರ ಅಂಟಿಸಿರುವುದು ಕಂಡುಬಂದಿದೆ.

ಪತ್ತೆಯಾದ ಬಾಕ್ಸ್ ಗಳ ಒಳಗೆ ಗೃಹ ಬಳಕೆಗೆ ಸಂಬಂಧಿಸಿದ ನಾನ್‍ಸ್ಟಿಕ್ ಕೋಟಿಂಗ್ ಇರುವ ಕಡಾಯಿ, ಪ್ರೈಫ್ಯಾನ್, ಕ್ಯಾರೋಲ್, ವುಡ್ ಸ್ಟಿಕ್‍ಗಳು ಕಂಡುಬಂದಿವೆ. ಮತದಾರರಿಗೆ ಹಂಚಲು ದಾಸ್ತಾನು ಮಾಡಿರುವ ಅನುಮಾನ ವ್ಯಕ್ತವಾಗಿದ್ದು, ದಾಸ್ತಾನುಮಾಡಿದ ಶೆಡ್ಡಿನ ಮಾಲೀಕ ಮಾಲತೇಶ ಜಾಧವ್ ಎಂಬುವರು ಸ್ಥಳಕ್ಕೆ ಬಂದು ಸಹಕರಿಸಿದ ಕಾರಣ ದಾಸ್ತಾನು ಮಾಡಿದ ಶೆಡ್‍ನ್ನು ಶೀಲ್‍ಮಾಡಿ ಮಾಲೀಕನ ವಿರುದ್ಧ ಕಲಂ 171(ಇ) ಐಪಿಸಿ ರೀತ್ಯ ಪ್ರಕರಣ ದಾಖಲು ಮಾಡಲಾಗಿದೆ.

ದಾವಣಗೆರೆ ದಕ್ಷಿಣ ವಿಭಾಗದ ಮತಕ್ಷೇತ್ರದ (107) ಸಹಾಯಕ ಚುನಾವಣಾಧಿಕಾರಿ ಬಿ.ಎಂ.ಮಾನೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಾದ ಅನೀಲ್ ಕುಮಾರ, ಶಿವಾನಂದ ಡಿ. ಹಾಗೂ ಪೊಲೀಸ್‍ರ ಸಮಕ್ಷಮದಲ್ಲಿ ಪಂಚನಾಮೆ ನಡೆಸಿ ದೂರು ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *