ವರದಿ ಮತ್ತು ಫೋಟೋ ಕೃಪೆ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.09 : ರೋಟರಿ ಸಂಸ್ಥೆ ಮೊದಲಿನಿಂದಲೂ ಶಿಕ್ಷಣ ಮತ್ತು ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುತ್ತಾ ಬರುತ್ತಿದೆ ಎಂದು ರೊ.ಎಂ.ಕೆ.ರವೀಂದ್ರ ಹೇಳಿದರು.
ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ತಾಲ್ಲೂಕಿನ ಗ್ರಾಮೀಣ ಭಾಗದ ಎಂಟನೆ ಹಾಗೂ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ವಾಸವಿ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಎನ್.ಟಿ.ಎಸ್.ಇ. ಹಾಗೂ ಎನ್.ಎಂ.ಎಂ.ಎಸ್. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಉದ್ಗಾಟಿಸಿ ಮಾತನಾಡಿದರು.
ಪೋಲಿಯೋ ನಿರ್ಮೂಲನೆಗಾಗಿ ಕಳೆದ 35 ವರ್ಷಗಳಿಂದಲೂ ರೋಟರಿ ಸಂಸ್ಥೆ ನಿರಂತರವಾಗಿ ಕೆಲಸ ಮಾಡುತ್ತ ಒಂದೊಂದು ಪೋಲಿಯೋ ಹನಿ ಲಸಿಕೆಗೂ ತಗಲುವ ವೆಚ್ಚವನ್ನು ಭರಿಸುತ್ತಿದೆ. ಸಾಮಾನ್ಯ ಶಾಲೆಯನ್ನು ಹ್ಯಾಪಿ ಸ್ಕೂಲ್ ಆಗಿ ಪರಿವರ್ತಿಸಿ ಶಿಕ್ಷಕರುಗಳಿಗೆ ತರಬೇತಿಯನ್ನು ನೀಡುವ ಮೂಲಕ ಅಗತ್ಯ ಸಲಕರಣೆಗಳನ್ನು ಪೂರೈಸುತ್ತಿದೆ. ಮಕ್ಕಳು ಶಿಕ್ಷಣದ ಕಡೆ ಗಮನ ಕೊಟ್ಟು ಕಲಿತಾಗ ಮುಂದೆ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಹಾಗಾಗಿ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಹೇಳುವ ವಿಷಯಗಳನ್ನು ಆಲಿಸುವಂತೆ ತಿಳಿಸಿದರು.
ಶಿಕ್ಷಣ ಇಲಾಖೆಯ ಇ.ಸಿ.ಓ. ನಾಗರಾಜ್ ಮಾತನಾಡುತ್ತ ಇಂತಹ ತರಬೇತಿಗಳಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಭಾಗವಹಿಸುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸಬಹುದು ಎನ್ನುವ ಆತ್ಮಸ್ಥೈರ್ಯ ಮೂಡುತ್ತದೆ. ದೊಡ್ಡ ದೊಡ್ಡ ನಗರಗಳಲ್ಲಿ ಹಣ ನೀಡಿ ಸ್ಪರ್ಧಾತ್ಮಕ ಪರೀಕ್ಷಗಳಿಗೆ ತರಬೇತಿಗಳನ್ನು ಪಡೆಯಬೇಕಾಗುತ್ತದೆ. ಆದರೆ ಚಿತ್ರದುರ್ಗದಲ್ಲಿ ರೋಟರಿ ಸಂಸ್ಥೆ ಉಚಿತವಾಗಿ ಒದಗಿಸಿರುವ ತರಬೇತಿಯಲ್ಲಿ ಪಾಲ್ಗೊಂಡು ನಗರ ಪ್ರದೇಶಗಳ ಮಕ್ಕಳ ಜೊತೆ ಪೈಪೋಟಿ ನೀಡುವ ಸಾಮಥ್ರ್ಯ ಬೆಳೆಸಿಕೊಳ್ಳಿ ಎಂದು ಹೇಳಿದರು.
ಸ್ಪರ್ಧಾತ್ಮಕ ಯುಗವಾಗಿರುವುದರಿಂದ ಒಂದೊಂದು ಅಂಕಕ್ಕೂ ಮಹತ್ವವಿದೆ ಎನ್ನುವುದನ್ನು ಮಕ್ಕಳು ಗಮನದಲ್ಲಿಟ್ಟುಕೊಂಡು ಸಂಪನ್ಮೂಲ ವ್ಯಕ್ತಿಗಳು ತರಬೇತಿಯಲ್ಲಿ ಹೇಳುವ ವಿಚಾರಗಳನ್ನು ಶ್ರದ್ದೆಯಿಂದ ಕೇಳಿಸಿಕೊಳ್ಳಿ. ಶಾಲೆಯಲ್ಲಿ ಕಲಿತಿದ್ದನ್ನು ಸಂಜೆ ಮನೆಗೆ ಹೋದಾಗ ಪುನರಾವರ್ತನೆ ಮಾಡಿದರೆ ಮನಸ್ಸಿನಲ್ಲಿ ಉಳಿದು ಪರೀಕ್ಷೆಗೆ ಸುಲಭವಾಗಲಿದೆ ಎಂದರು.
ಬಿ.ಸಿ.ಆರ್.ಸಂಪತ್‍ಕುಮಾರ್, ನೋಡಲ್ ಆಫೀಸರ್ ವೇಣುಗೋಪಾಲ್, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷ ರೊ. ಎಂ.ಗಿರೀಶ್, ಕಾರ್ಯದರ್ಶಿ ರೊ.ಶಶಿಧರ ಗುಪ್ತ, ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷೆ ಶ್ರೀಮತಿ ಸುಧಾ ಗೋವಿಂದರಾಜ್, ಕಾರ್ಯದರ್ಶಿ ನಂದಿನಿ ರಾಘವೇಂದ್ರ, ರೊ.ರಾಘವೇಂದ್ರ, ವಿಶೇಷ ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ಡಾ.ಪಿ.ಎಸ್.ರಾಘವೇಂದ್ರ, ಕಾರ್ಯಕ್ರಮದ ಸಂಚಾಲಕ ಟಿ.ಎನ್.ಮಾರುತಿ ಮೋಹನ್ ಈ ಸಂದರ್ಭದಲ್ಲಿದ್ದರು.