ಚಿತ್ರದುರ್ಗ, (ಡಿ.12) : ರಾಷ್ಟ್ರೀಯ ಹೆದ್ದಾರಿ 48 ( ಹೊಸ ಹೈವೆ) ರಲ್ಲಿ ಭಾನುವಾರ ಸಂಜೆ ಸುಮಾರು 7 ಗಂಟೆ ಸಮಯದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು ಟ್ರಾಕ್ಟರ್ ಚಾಲಕನಿಗೆ ಗಂಭೀರ ಗಾಯಗಳಾಗಿವೆ.
ಹೊರವಲಯದ ದೊಡ್ಡಸಿದ್ದವ್ವನಹಳ್ಳಿ ಬಳಿ ಅಪಘಾತ ಸಂಭವಿಸಿದೆ. ಹಿರಿಯೂರು ಕಡೆಗೆ ಹೋಗುತ್ತಿದ್ದ ಟ್ರಾಕ್ಟರ್ ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ.
ಹಳೆಯ ಟ್ರಾಕ್ಟರ್ ಆಗಿದ್ದ ಕಾರಣ ಅದಕ್ಕೆ ಯಾವುದೇ ಲೈಟ್ ಗಳಿಲ್ಲದ ಕಾರಣ ಹಿಂದೆ ಬರುತ್ತಿದ್ದ ಕಾರಿನವರಿಗೆ ಮುಂದೆ ಟ್ರಾಕ್ಟರ್ ಹೋಗುತ್ತಿದೆ ಎಂಬುದು ತಿಳಿಯದೆ ಡಿಕ್ಕಿಯಾದ ಕಾರಣ ಈ ಅಪಘಾತ ಸಂಭವಿಸಿದೆ. ಗಾಯಗೊಂಡ ಚಾಲಕನನ್ನು ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಯಾವುದೇ ಪ್ರಾಣಾಪಾಯ ಇಲ್ಲ ಎಂದು ತಿಳಿದು ಬಂದಿದೆ.
ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.